janadhvani

Kannada Online News Paper

ಕೊರೋನಾ ವೈರಸ್ ಪರೀಕ್ಷೆಗೆ ಗೂಗಲ್ ನಿಂದ ವೆಬ್ ಸೈಟ್ ಬಿಡುಗಡೆ

ವಾಷಿಂಗ್ಟನ್: ವಿಶ್ವಾದ್ಯಂತ ಕೊರೋನಾ ಮಹಾಮಾರಿಗೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸದ್ಯ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರಿಹಾರವೆಂಬಂತೆ ಗೂಗಲ್ ಕೊರೋನಾ ವೈರಸ್ ಪರೀಕ್ಷೆಗಾಗಿ ವೆಬ್ ಸೈಟ್ ಬಿಡುಗಡೆ ಮಾಡಿದೆ.

ಜಗತ್ತನ್ನೇ ಕಂಗೆಡಿಸಿರುವ ಕೊರೋನಾ ವೈರಸ್ ಗೆ ಈಗಾಗಲೇ ಏಳು ಸಾವಿರ ಮಂದಿ ಮೃತಪಟ್ಟಿದ್ದಾರೆ. ತೀವ್ರವಾಗಿ ವ್ಯಾಪಿಸುತ್ತಿರುವ ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಆಯಾ ದೇಶಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಈ ಮಧ್ಯೆ ಅಮೆರಿಕದಲ್ಲಿ ಗೂಗಲ್ ವೆಬ್ ಸೈಟ್ ವೊಂದನ್ನು ಲೈವ್ ಮಾಡಿದೆ. ಈ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಕೊರೋನಾ ವೈರಸ್ ಟೆಸ್ಟ್ ಕುರಿತು ಮಾಹಿತಿ ಪಡೆಯಬಹುದು. ಗೂಗಲ್ ನ ಅಂಗಸಂಸ್ಥೆಯಾಗಿರುವ ವರ್ಲಿ ಈ ವೆಬ್ ಸೈಟ್ ಅನ್ನು ಅಭಿವೃದ್ಧಿಪಡಿಸಿದೆ.

ಗೂಗಲ್ ಆ್ಯಪ್ ನಲ್ಲಿ ನೊಂದಣಿಯಾಗುವ ವಿಧಾನ

*ಈ ವೆಬ್ಸೈಟ್ ಗೆ ಭೇಟಿ ನೀಡಿ ಸೈನ್ ಅಪ್ ಆಗಬೇಕು. ಬಳಿಕ ವೆಬ್ಸೈಟ್ ನಲ್ಲಿ ನಿಮ್ಮ ಖಾತೆ ತೆರೆದುಕೊಳ್ಳಲಿದೆ.

* ಖಾತೆ ತೆರೆದ ಬಳಿಕ ನೀವು Covid-19 ಗೆ ಸಂಬಂಧಿಸಿದ ಒಂದು ಅನುಮತಿ ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ನೀವು ನೀಡಿದ ಬಳಿಕ ಅದನ್ನು ಸಬ್ಮಿಟ್ ಮಾಡಬೇಕು.

* ಬಳಿಕ ವೆಬ್ಸೈಟ್ ಮೂಲಕ ನಿಮ್ಮ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯ ಒಂದು ಭಾಗವಾಗಿ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗುವುದು. ಈ ಪ್ರಶ್ನೆಗಳು ನಿಮ್ಮ ಆರೋಗ್ಯ ಹಾಗೂ ಲಕ್ಷಣಗಳನ್ನು ಆಧರಿಸಿ ಇರಲಿವೆ.

* ಒಂದು ವೇಳೆ ನಿಮ್ಮ ಲಕ್ಷಣಗಳು ಕೊರೊನಾ ಪಾಸಿಟಿವ್ ಕಂಡು ಬಂದರೆ ನಿಮ್ಮನ್ನು ಕೊರೊನಾ ಟೆಸ್ಟ್ ಗಾಗಿ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಅವಶ್ಯಕವಾಗಿರುವ ಮಾಹಿತಿಯನ್ನು ನಿಮಗೆ ವೆಬ್ಸೈಟ್ ಮೂಲಕವೇ ನೀಡಲಾಗುವುದು.

* ಈ ನಾಲ್ಕೂ ಹಂತಗಳು ಮುಗಿದ ಬಳಿಕ ನಿಮ್ಮ ಖಾತೆಯಲ್ಲಿ ನಿಮಗೆ ಕೊರೊನಾ ವೈರಸ್ ಗೆ ಸಂಬಂಧಿಸಿದ ರಿಪೋರ್ಟ್ ಸಿಗಲಿದೆ. ಇದರಲ್ಲಿ ನಿಮ್ಮ ರಿಪೋರ್ಟ್ ಪಾಸಿಟಿವ್ ಆಗಿದೆಯೋ ಅಥವಾ ನೆಗೆಟಿವ್ ಆಗಿದೆಯೋ ಎಂಬುದು ಇದರಲ್ಲಿ ತಿಳಿಯಲಿದೆ.

error: Content is protected !! Not allowed copy content from janadhvani.com