ಬೆಂಗಳೂರು,ಮಾ. 17: ಕೊರೋನಾ ವೈರಸ್ ಸೋಂಕು ಬೇಗ ಹರಡುವ ಭೀತಿಯಲ್ಲಿ ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳಿಗೆಂದು ಇರುವ ಬಯೋಮೆಟ್ರಿಕ್ ಲಾಗಿನ್ ಸಿಸ್ಟಂ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಇದೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನ ಸರ್ಕಾರ ಕೈಗೊಂಡಿದೆ.
ಈಗ ಬಿಪಿಎಲ್ ಕಾರ್ಡ್ದಾರರಿಗೆ ಪಡಿತರ ವಿತರಣೆಗೆ ಪಡೆಯುವ ಬಯೋಮೆಟ್ರಿಕ್ ಅನ್ನೂ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ಮುಂದೆ ರೇಷನ್ ಪಡೆಯಲು ಬೆರಳಚ್ಚು ನೀಡುವ ಅಗತ್ಯ ಇರುವುದಿಲ್ಲ. ಕೇವಲ ರೇಷನ್ ಕಾರ್ಡ್ ತೋರಿಸಿದರೆ ಸಾಕು ಪಡಿತರ ನೀಡಲಾಗುತ್ತದೆ.
ಇವತ್ತು ವಿಧಾನ ಪರಿಷತ್ನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಈ ವಿಚಾರವನ್ನು ತಿಳಿಸಿದರು. ಬಹು ಮಂದಿಯು ಬಯೋಮೆಟ್ರಿಕ್ ಬಳಸುವುದರಿಂದ ರೋಗಾಣು ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.