ರಿಯಾದ್: ಉಮ್ರಾ ವೀಸಾ ಪಡೆದಿರುವವರಿಗೆ ಅವರು ಪಾವತಿಸಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ಅಮಾನತಿನಲ್ಲಿಡಲಾದ ಉಮ್ರಾ ವೀಸಾ ಸೇವೆಯನ್ನು ಮರುಪ್ರಾರಂಭಿಸಲು ಇನ್ನೂ ಸಮಯ ನಿಗಧಿಪಡಿಸಲಾಗಿಲ್ಲ. ಕೋವಿಡ್ -19ರಿಂದ ದೇಶವನ್ನು ರಕ್ಷಿಸುವ ಭಾಗವಾಗಿ ಉಮ್ರಾ ವೀಸಾವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಕರೋನ ವೈರಸ್‌ನಿಂದ ದೇಶವನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ಉಮ್ರಾ ಯಾತ್ರಿಕರನ್ನು ಇದೇ ಮೊದಲ ಬಾರಿಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಕಾರಣಕ್ಕಾಗಿ ವಿವಿಧ ದೇಶಗಳ ಅನೇಕ ಯಾತ್ರಿಕರು ತಮ್ಮ ಉಮ್ರಾ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ತ್ವರಿತ ಅಧಿಸೂಚನೆಯಿಂದಾಗಿ ಉಮ್ರಾ ಏಜೆಂಟರು ಅಥವಾ ವಿಮಾನಯಾನ ಕಂಪನಿಗಳಿಗೆ ಮತ್ತು ಯಾತ್ರಾರ್ಥಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲು ಸಾಧ್ಯವಾಗಿಲ್ಲ.
ವಿಮಾನ ಹತ್ತಿದ ನಂತರ ಮತ್ತು ವಿಮಾನ ನಿಲ್ದಾಣ ತಲುಪಿದ ನಂತರ ಅನೇಕರು ತಮ್ಮ ಹಾರಾಟವನ್ನು ಮೊಟಕುಗೊಳಿಸಬೇಕಾಯಿತು. ಈಗಾಗಲೇ ಉಮ್ರಾ ವೀಸಾ ಪಡೆದ ಅನೇಕರಿದ್ದಾರೆ. ಆಯಾ ದೇಶಗಳಲ್ಲಿನ ಅಧಿಕೃತ ಉಮ್ರಾ ಏಜೆಂಟರ ಮೂಲಕ ಅವರಿಗೆ ಪಾವತಿಸಿದ ಶುಲ್ಕ ಮತ್ತು ಸೇವಾ ಶುಲ್ಕವನ್ನು ಮರು ಪಾವತಿಸಲಾಗುವುದು. ಈ ಉದ್ದೇಶಕ್ಕಾಗಿ ಎಲೆಕ್ಟ್ರಾನಿಕ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಯಾವುದೇ ವಿಚಾರಣೆಗಾಗಿ 00 96 69 2000 2814 ಅಥವಾ mohcc@haj.gov.saಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.