janadhvani

Kannada Online News Paper

ಹಂತಕರ ಗಲ್ಲು ಶಿಕ್ಷೆ ಮತ್ತೆ ಮುಂದೂಡಿಕೆ: ವ್ಯವಸ್ಥೆಯ ವೈಫಲ್ಯವೇ ಕಾರಣ- ನಿರ್ಭಯಾಳ ಅಮ್ಮ

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯನ್ನು ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮತ್ತೆ ಮುಂದೂಡಿದೆ. ಅಪರಾಧಿಗಳಲ್ಲಿ ಒಬ್ಬನಾದ ಪವನ್‌ ಗುಪ್ತಾ, ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿರುವುದು ಇದಕ್ಕೆ ಕಾರಣ.

ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ದೆಹಲಿಯ ತಿಹಾರ್‌ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿ ನಿಗದಿಯಾಗಿತ್ತು. ಆದರೆ, ಈಗ ಮೂರನೇ ಬಾರಿಗೆ ಶಿಕ್ಷೆ ಜಾರಿ ಮುಂದಕ್ಕೆ ಹೋಗಿದೆ.

ಸಂತ್ರಸ್ತರ ಕಡೆಯವರು ನ್ಯಾಯಾಲಯದ ಈ ನಿರ್ಧಾರಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗ ಮತ್ತು ಸಾಂವಿಧಾನಿಕವಾದ ಎಲ್ಲ ಅವಕಾಶಗಳು ಪೂರ್ಣ ಗೊಂಡಿರುವ ಅಪರಾಧಿಗಳಿಗೆ ಪ್ರತ್ಯೇಕವಾಗಿ ಗಲ್ಲು ಶಿಕ್ಷೆ ಜಾರಿ ಮಾಡಲು ಅವಕಾಶ ಕೊಡಬೇಕು ಎಂದು ಕೋರಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ನಿಗದಿ ಮಾಡಿದೆ.

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾರ್ಚ್‌ 3ರ ಬೆಳಿಗ್ಗೆ ಆರು ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ದೆಹಲಿ ಕೋರ್ಟ್‌ ಫೆಬ್ರುವರಿ 17ರಂದು ತೀರ್ಪು ನೀಡಿತ್ತು.

2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್‌ ಕುಮಾರ್‌ಸಿಂಗ್, ಪವನ್ ಗುಪ್ತಾ, ವಿನಯ್‌ಕುಮಾರ್ ಶರ್ಮಾ, ಅಕ್ಷಯ್‌ ಕುಮಾರ್ ಅವರನ್ನು ಗಲ್ಲಿಗೇರಿಸುವಂತೆ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಈ ಆದೇಶ ಹೊರಡಿಸಿದ್ದರು.

ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ವಿಳಂಬ ಯಾಕೆ?: ನಿರ್ಭಯಾಳ ಅಮ್ಮ

ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಆದೇಶ ಹೊರಡಿಸಿದ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಲು ಯಾಕೆ ವಿಳಂಬ ಮಾಡುತ್ತಿದೆ? ಗಲ್ಲು ಶಿಕ್ಷೆಯ ದಿನಾಂಕವನ್ನು ಮುಂದೂಡುತ್ತಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಅಪರಾಧಿಗಳಿಗೆ ಶಿಕ್ಷೆ ಯಾವಾಗ? . ನಮ್ಮ ವ್ಯವಸ್ಥೆ ಅಪರಾಧಿಗಳಿಗೆ ಬೆಂಬಲ ನೀಡುತ್ತದೆ ಎಂದು ನಿರ್ಭಯಾಳ ಅಮ್ಮ ಆಶಾ ದೇವಿ ಹೇಳಿದ್ದಾರೆ.

error: Content is protected !! Not allowed copy content from janadhvani.com