ಮನಾಮ: ಬಹ್ರೈನ್, ಕುವೈತ್, ಇರಾಕ್ ಮುಂತಾದ ದೇಶಗಳಲ್ಲಿ ಮೊದಲ ಕರೋನವೈರಸ್ ಪತ್ತೆಹಚ್ಚಲಾಗಿದೆ. ಈಶಾನ್ಯ ಇರಾನಿನ ನಗರವಾದ ಮಷಾದ್‌ನಿಂದ ಕುವೈತ್‌ಗೆ ಬಂದವರ 700 ಮಂದಿಯ ಪೈಕಿ ಮೂವರಿಗೆ ವೈರಸ್ ದೃಢಪಟ್ಟಿದೆ. 53 ವರ್ಷದ ಕುವೈತ್ ಪ್ರಜೆ ಮತ್ತು 61 ವರ್ಷದ ಸೌದಿ ಪ್ರಜೆಯಿಂದ ಈ ರೋಗ ಪತ್ತೆಯಾಗಿದೆ.
ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯ ವೈಜ್ಞಾನಿಕ ಮತ್ತು ಪ್ರಮಾಣಿತ ಶಿಫಾರಸುಗಳಿಗೆ ಅನುಗುಣವಾಗಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ ಮತ್ತು ರೋಗ ಪತ್ತೆಯಾದ ಸೌದಿ ಪ್ರಜೆಗೆ ಸಂಬಂಧಿಸಿದಂತೆ ಕುವೈತ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಸೌದಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಬಹ್ರೈನ್: ಇರಾನ್‌ನಿಂದ ಬಹ್ರೈನ್‌ಗೆ ಬಂದ ಬಹ್ರೈನ್ ಪ್ರಜೆಗೆ ಈ ರೋಗ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವಿಶೇಷ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಇಬ್ರಾಹೀಂ ಖಲೀಲ್ ಕಾನೂ ವೈದ್ಯಕೀಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಬಹ್ರೈನ್ ಸುದ್ದಿ ಸಂಸ್ಥೆ (ಬಿಎನ್‌ಎ) ವರದಿ ಮಾಡಿದೆ. ರೋಗಿಯೊಂದಿಗೆ ಸಂಪರ್ಕದಲ್ಲಿದ್ದವರ ಮೇಲ್ವಿಚಾರಣೆ ಮಾಡಲು ಅಗತ್ಯ ವೈದ್ಯಕೀಯ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇರಾಕ್: ದೇಶದಲ್ಲಿ ಮೊದಲ ಕರೋನವೈರಸ್ ಪ್ರಕರಣವನ್ನು ಇರಾಕ್‌ನ ನಜಫ್ ನಗರದಲ್ಲಿ ಪತ್ತೆಹಚ್ಚಲಾಗಿದೆ ಎಂದು ಇರಾಕ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಗಡಿಯಲ್ಲಿ ಪರಿಶೀಲಿಸುವ ಮೊದಲು ಅವರು ಇರಾಕ್‌ಗೆ ಪ್ರವೇಶಿಸಿದ್ದು, ಇರಾನ್‌ನಿಂದ ಬರುವ ಇರಾಕೇತರರು ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದಲ್ಲಿ ಜನವರಿ ಕೊನೆಯ ವಾರದಲ್ಲಿ ಭುಗಿಲೆದ್ದ ಈ ವೈರಸ್, 77,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 2,500 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಇರಾನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ವೈರೆಸ್ ಕಂಡು ಬಂದ ಕಾರಣ ಗಲ್ಫ್ ದೇಶಗಳಿಂದ ಇರಾನ್ ಗೆ ವಾಯು, ರಸ್ತೆ ಮತ್ತು ಜಲ ಸಾರಿಗೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.