janadhvani

Kannada Online News Paper

ವಿದ್ಯಾರ್ಥಿಗಳಿಗೆಲ್ಲಾ ಉಚಿತ ಬಸ್​ ಪಾಸ್​ ನೀಡಬೇಕು- ಲ್ಯಾಪ್​ಟಾಪ್​​​ ವಿತರಣಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

ಬಾಗಲಕೋಟೆ,ಫೆ.04: ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್​ ಬಸ್​ ಕೊಡಬೇಕೆಂದು ಬಜೆಟ್​​ನಲ್ಲಿ ಘೋಷಿಸಿದ್ದೆ. ಎಸ್​ಸಿ,​​ ಎಸ್​ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​ ಕೊಟ್ಟೆವು. ಉಳಿದ ಮಕ್ಕಳಿಗೆ ಕೊಡಲು ಸಾಧ್ಯವಾಗಲಿಲ್ಲ. ಆದರೆ ಈಗ ಎಲ್ಲಾ ಮಕ್ಕಳಿಗೂ ಉಚಿತ ಬಸ್​ ಪಾಸ್​ ಕೊಡಬೇಕು,” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ಹೇಮರೆಡ್ಡಿ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಲ್ಯಾಪ್​ಟಾಪ್​​​ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟ ಸವಲತ್ತುಗಳನ್ನು ಸ್ಮರಿಸಿದರು. ಜೊತೆಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​​ ಪಾಸ್​ ನೀಡಬೇಕೆಂದು ಹೇಳಿದರು. “ನಾವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​​ಟಾಪ್​ ಕೊಡಲು ನಿರ್ಧರಿಸಿದ್ದೆವು. ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ವಿತರಣೆ ಮಾಡಿದೆವು. ಆದರೆ ಟೆಂಡರ್ ಸಮಸ್ಯೆಯಿಂದಾಗಿ ಉಳಿದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ಕೊಡಲು ಸಾಧ್ಯವಾಗಲಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರೆದ ಅವರು, ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವುದಾಗಿ ಬಜೆಟ್​​ನಲ್ಲಿ ಘೋಷಿಸಿದ್ದೆ. ಒಂದು ರೂಪಾಯಿ ಕೂಡ ಶುಲ್ಕ ಕಟ್ಟದೇ ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಪಡೆಯಬಹುದು ಎಂದು ಹೇಳಿದ್ದೆ. ಆದರೆ ಅದನ್ನು ಜಾರಿ ಮಾಡಲಿಲ್ಲ. ಈಗ ಯಡಿಯೂರಪ್ಪ ಆ ಯೋಜನೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ನಾನು ಘೋಷಿಸಿದ ಯೋಜನೆಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಜಾರಿ ಮಾಡದೇ ಹೊರಟು ಹೋದರು. ಈಗ ಯಡಿಯೂರಪ್ಪನವರಾದರೂ ಜಾರಿ ಮಾಡಲಿ ಎಂದು ಒತ್ತಾಯ ಮಾಡುತ್ತೇನೆ ಎಂದರು.

ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಈಗ ಉಚಿತ ಲ್ಯಾಪ್​ಟಾಪ್​ ಕೊಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ, ಎರಡನೇ ವರ್ಷದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್​ ಟಾಪ್​​ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಎರಡನೇ ವರ್ಷದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್​ ಟಾಪ್ ಕೊಡಬೇಕೆಂದು ಅಧಿವೇಶನದಲ್ಲಿ ಒತ್ತಾಯಿಸುತ್ತೇನೆ ಎಂದರು.ಇಷ್ಟು ಮಾತ್ರವಲ್ಲದೇ, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನೂ ಸಹ ಕೊಡಬೇಕು. ಕಾಲೇಜು ಮುಗಿಸಿ ಹೊರ ಬಂದಾಗ ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಬೇಕಾಗುತ್ತದೆ. ಬಾದಾಮಿ, ಬಾಗಲಕೋಟೆ, ಕರ್ನಾಟಕದಲ್ಲಿ ಮಾತ್ರ ಅಲ್ಲ. ಜಾಗತಿಕವಾಗಿ ಸ್ಪರ್ಧೆ ಮಾಡಬೇಕಾಗುತ್ತದೆ. ಅಂತಹ ಸ್ಪರ್ಧೆಗೆ ನಮ್ಮ ಮಕ್ಕಳನ್ನು ನಾವು ತಯಾರು ಮಾಡಬೇಕು. ತಯಾರು ಮಾಡಿದಾಗ ಮಾತ್ರ ಉತ್ತಮ ಶಿಕ್ಷಣ ಪಡೆದಂತೆ ಎಂದು ಹೇಳಿದರು.

error: Content is protected !! Not allowed copy content from janadhvani.com