janadhvani

Kannada Online News Paper

ಜಾಮಿಯಾ ಮಿಲ್ಲಿಯಾ ಬಳಿ ಮತ್ತೆ ಗುಂಡಿನ ದಾಳಿ

ನವದೆಹಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಗೇಟ್ ನಂಬರ್ 5 ರ ಬಳಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಜಾಮಿಯಾ ಸಮನ್ವಯ ಸಮಿತಿ ತಿಳಿಸಿದೆ.

ದಾಳಿಕೋರರು ಕೆಂಪು ಬಣ್ಣದ ಸ್ಕೂಟಿಯಲ್ಲಿದ್ದರು, ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ದುಷ್ಕರ್ಮಿಗಳ ಪೈಕಿ ಒಬ್ಬ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದ ಎಂದು ಹೇಳಲಾಗಿದೆ. ಜಾಮಿಯಾ ಸಮನ್ವಯ ಸಮಿತಿ ನೀಡಿರುವ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಗಳ ಹಿಂದಷ್ಟೇ ಜಾಮಿಯಾ ವಿವಿ ಹೊರಗಡೆ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಬಂದೂಕಿನಿಂದ ಗುಂಡಿಕ್ಕಿದ್ದ. ಘಟನೆಯಲ್ಲಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದ. ಅಲ್ಲದೇ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಗುರಿಯಾಗಿಸಿ ನಡೆದ ಮೂರನೇ ದಾಳಿ ಇದು.