ನವದೆಹಲಿ,ಜ.29: ಮುಸ್ಲಿಮ್ ಮಹಿಳೆಯರ ಮಸೀದಿಯಲ್ಲಿನ ಪ್ರಾರ್ಥನೆ ಧಾರ್ಮಿಕ ವಿಷಯವಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಸೂಕ್ತವಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಬುಧವಾರ ಸುಪ್ರೀಂಕೋರ್ಟ್ಗೆ ಹೇಳಿದೆ.
ಮಹಿಳೆಯರಿಗೂ ಮಸೀದಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡುವಂತೆ ಕೋರಿ ಮುಸ್ಲಿಂ ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ಮುಸ್ಲಿಂ ಕಾನೂನು ಮಂಡಳಿ ಹೀಗೆ ಪ್ರತಿಕ್ರಿಯಿಸಿದೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿರುವ ಮುಸ್ಲಿಂ ಕಾನೂನು ಮಂಡಳಿ, ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಕ್ಕೆ ಅವಕಾಶ ಮುಕ್ತವಾಗಿದೆ. ಆದರೆ ಪುರುಷರಂತೆ ಅವರಿಗೆ ಅದು ಕಡ್ಡಾಯವೇನಲ್ಲ. ಪುರುಷರು ಮತ್ತು ಮಹಿಳೆಯರ ನಡುವಿನ ವ್ಯತ್ಯಾಸವೆಂದರೆ, ಮಹಿಳೆಯರಿಗೆ ಮಸೀದಿ ಬದಲಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಧಾರ್ಮಿಕ ವಿಷಯದಲ್ಲಿ ನ್ಯಾಯಾಲಯ ಸಲಹೆ ನೀಡಬಹುದು. ಆದರೆ, ನಿರ್ದೇಶನ ನೀಡುವಂತಿಲ್ಲ ಎಂದು ಹೇಳಿದೆ.
ಇಸ್ಲಾಂ ಧರ್ಮವು ಮಹಿಳೆಯರು ಮಸೀದಿಯಲ್ಲಿ ಪ್ರಾರ್ಥನೆಗೆ ಸೇರ್ಪಡೆಗೊಳ್ಳುವುದನ್ನು ಕಡ್ಡಾಯಗೊಳಿಸಿಲ್ಲ ಅಥವಾ ಪುರುಷರಂತೆ ಮಹಿಳೆಯರು ಶುಕ್ರವಾರ ನಮಾಜ್ಅನ್ನು ಮಸೀದಿಯಲ್ಲಿ ಮಾಡುವುದು ಕಡ್ಡಾಯವಲ್ಲ.
ಏಕೆಂದರೆ ಇಸ್ಲಾಂ ಧರ್ಮದ ಸಿದ್ಧಾಂತಗಳ ಪ್ರಕಾರ, ಮಹಿಳೆಯರು ಮಸೀದಿ ಅಥವಾ ಮನೆಯಲ್ಲಿ ಆಕೆಯ ಆಯ್ಕೆಯಂತೆ ಪ್ರಾರ್ಥಿಸುವುದಕ್ಕಾಗಿ ಅವಕಾಶ ನೀಡಲಾಗಿದೆ ಎಂದು ಮುಸ್ಲಿಂ ಕಾನೂನು ಮಂಡಳಿ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ
ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಅಸಂವಿಧಾನಿಕ ಮತ್ತು ಜೀವನ, ಸಮಾನತೆ, ಲಿಂಗ ನ್ಯಾಯದ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿ ಯಾಸ್ಮಿಮ್ ಜುಬೇರ್, ಅಹ್ಮದ್ ಪಿರ್ಜಾದೆ ಮತ್ತು ಜುಬೇರ್ ಅಹ್ಮದ್ ಪಿರ್ಜಾದೆ ಎಂಬುವವರು ಸುಪ್ರೀಂಕೋರ್ಟ್ನಲ್ಲಿ ವಾದಿಸಿದ್ದರು. ಅಲ್ಲದೇ, ಮಸೀದಿಗೆ ತೆರಳಿ ನಮಾಜ್ ಮಾಡಲು ಮಹಿಳೆಯರಿಗೆ ಅವಕಾಶ ನೀಡುವಂತೆ ಸರ್ಕಾರ ಮತ್ತು ಮುಸ್ಲಿಂ ಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.