ಜೆರುಸಲೆಮ್: ಇತಿಹಾಸದಲ್ಲಿ ಮೊದಲ ಬಾರಿಗೆ ಇಸ್ರೇಲ್ ತನ್ನ ನಾಗರಿಕರಿಗೆ ಸೌದಿ ಅರೇಬಿಯಾ ಭೇಟಿಗೆ ಅನುಮತಿ ನೀಡಿದೆ. ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದ್ದು, ಹಜ್-ಉಮ್ರಾ ನಿರ್ವಹಿಸಲು ಅಥವಾ ವ್ಯವಹಾರ ಸಂಬಂಧಿತ ಉದ್ದೇಶಗಳಿಗಾಗಿ ಒಂಬತ್ತು ದಿನಗಳ ವರೆಗೆ ಸೌದಿ ಅರೇಬಿಯಾಗೆ ಭೇಟಿ ನೀಡಬಹುದು ಎಂದು ಇಸ್ರೇಲ್ ಆಂತರಿಕ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯ ಏಷ್ಯಾದಲ್ಲಿ ಯುಎಸ್ ತನ್ನ ಶಾಂತಿ ಯೋಜನೆಯನ್ನು ಘೋಷಿಸುವ ಮುನ್ನ ಇಸ್ರೇಲ್‌ನ ಈ ನಿರ್ಧಾರವನ್ನು ಪ್ರಕಟಿಸಿದ್ದು, ಕುತೂಹಲ ಉಂಟುಮಾಡಿದೆ. ಯುಎಸ್ ತನ್ನ ಯೋಜನೆಗಾಗಿ ಸೌದಿ ಬೆಂಬಲವನ್ನು ಪಡೆಯಬಹುದು. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿಯಾಗಿ ಚರ್ಚೆ ಕೂಡ ನಡೆದಿದೆ.
ಇಸ್ರೇಲ್‌ನ ಪ್ಯಾಲಸ್ತೀನಿಯನ್ ಸಮುದಾಯದ ಜನರು ಈ ಹಿಂದೆ ಸೌದಿ ಅಧಿಕಾರಿಗಳ ಆಹ್ವಾನದ ಮೇರೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಆದರೆ ಆ ಭೆಟಿಗೆ ಇಸ್ರೇಲ್‌ನಿಂದ ಯಾವುದೇ ಅಧಿಕೃತ ಅನುಮತಿ ಇರಲಿಲ್ಲ.
ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಅಧಿಕೃತ ರಾಜತಾಂತ್ರಿಕ ಸಂಬಂಧವಿಲ್ಲ. ಅದೇ ಸಮಯದಲ್ಲಿ, ಇರಾನ್‌ನೊಂದಿಗೆ ವೈರತ್ವ ಹೊಂದಿರುವ ಉಭಯ ದೇಶಗಳ ನಡುವೆ ಸಹಮತ ಮೂಡಿಸುವಲ್ಲಿ ಅಮೆರಿಕ ಮುಂದಾಗಿದೆ ಎಂದು ಭಾವಿಸಲಾಗಿದೆ.