ಬೆಂಗಳೂರು: ‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ ಕಾರಣಕ್ಕೆ ಕೇರಳದ ಮಲಪುರಂನಲ್ಲಿ ಹಿಂದೂ ಕುಟುಂಬಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ,’ ಎಂದು ಆರೋಪಿಸಿ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಕೋಮು ಭಾವನೆ ಪ್ರಚೋದಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರ ಟ್ವೀಟ್ ಕುರಿತು ಮಲಪುರಂ ನಿವಾಸಿ, ಸುಪ್ರೀಂ ಕೋರ್ಟ್‌ನ ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಬುಧವಾರ ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ ಅವರು ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ‘ಕೇರಳ ಸರ್ಕಾರ ಮತ್ತೊಂದು ಕಾಶ್ಮೀರವಾಗುವುದರತ್ತ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಿದೆ. ಮಲಪುರಂ ಜಿಲ್ಲೆಯ ಕುಟ್ಟಿಪುರಮ್ ಪಂಚಾಯಿತಿಯ ಹಿಂದೂ ಕುಟುಂಬಗಳು ಸಿಎಎ ಬೆಂಬಲಿಸಿದವು ಎಂಬ ಕಾರಣಕ್ಕೆ ಅವರಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ದೇವರ ಸ್ವಂತ ನಾಡಿನ ಶಾಂತಿಧೂತರ ಈ ಅಸಹಿಷ್ಣುತೆಯನ್ನು ಮಾಧ್ಯಮಗಳು ಪ್ರಸಾರ ಮಾಡಬಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದರು.
ಇದೇ ಟ್ವೀಟ್‌ಗೆ ಸಂಬಂಧಿಸಿದಂತೆ ಕೇರಳದಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಚೆರುಕುನ್ನು ಗ್ರಾಮದ ಸಮಸ್ಯೆ ಕುರಿತು ಮಾತನಾಡಿರುವ ಅಲ್ಲಿನ ಪೊಲೀಸರು, ‘ಗ್ರಾಮದಲ್ಲಿ ಒಂದು ವರ್ಷದಿಂದಲೂ ನೀರಿನ ಸಮಸ್ಯೆ ಇದೆ. ವ್ಯಕ್ತಿಯೊಬ್ಬ ತನ್ನ ಬೋರ್‌ವೆಲ್‌ನಿಂದ ಸ್ಥಳೀಯರಿಗೆ ನೀರು ಪೂರೈಸುತ್ತಿದ್ದ. ಆದರೆ, ಪಂಪ್‌ಸೆಟ್‌ಗೆ ವಿದ್ಯುತ್ ಅನ್ನು ಕೃಷಿ ಕಾರಣಕ್ಕೆ ನೀಡಲಾಗಿತ್ತು. ಈ ಕುರಿತು ವಿದ್ಯುತ್ ಮಂಡಳಿ ಆತನಿಗೆ ನೋಟಿಸ್ ನೀಡಿದೆ. ಕೃಷಿಯೇತರ ಕಾರಣಕ್ಕೆ ಪಂಪ್ ಸೆಟ್ ಬಳಸದಂತೆ ಆತನಿಗೆ ವಿದ್ಯುತ್ ತಾಕೀತು ಮಾಡಿದೆ. ಹೀಗಾಗಿ ಆತ ನೀರು ಪೂರೈಕೆ ನಿಲ್ಲಿಸಿದ್ದಾನೆ,’ ಎಂದು ಹೇಳಿದ್ದಾರೆ.