janadhvani

Kannada Online News Paper

ರಾಜ್ಯದಲ್ಲಿ SDPI ನಿಷೇಧಿಸಲು ನಿರ್ಧಾರ- ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’(ಪಿಎಫ್‌ಐ) ಮತ್ತು ‘ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ’ (ಎಸ್‌ಡಿಪಿಐ) ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ನಿಷೇಧಕ್ಕೆ ಈಗಾಗಲೇ ಕ್ರಮಗಳನ್ನು ಆರಂಭಿಸಿದ್ದು, ಇವೆರಡೂ ಸಂಘಟನೆಗಳ ಬಗ್ಗೆ ಪೊಲೀಸರಿಂದ ವಿವರವಾದ ವರದಿ ಕೇಳಿದ್ದೇವೆ. ವರದಿ ಸಲ್ಲಿಕೆಯಾದ ತಕ್ಷಣ ಕಾನೂನು ಇಲಾಖೆ ಜತೆ ಚರ್ಚಿಸಿ, ಕೇಂದ್ರಕ್ಕೆ ಸಲ್ಲಿಸಲಾಗುವುದು’ ಎಂದು ಅವರು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಹಲವೆಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಮೈಸೂರಿನಲ್ಲಿ ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್‌ ಅವರ ಕೊಲೆ ಯತ್ನ, ಮಂಗಳೂರಿನಲ್ಲಿ ವ್ಯವಸ್ಥಿತ ಹಿಂಸಾಚಾರಕ್ಕೆ ಈ ಸಂಘಟನೆಗಳೇ ಕಾರಣ. ಇವುಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಮಾಹಿತಿ ಇದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಇವೆರಡೂ ಸಂಘಟನೆಗಳ ಮೇಲಿದ್ದ ಗಂಭೀರ ಪ್ರಕರಣಗಳನ್ನು ಕೈಬಿಟ್ಟ ಬಳಿಕ ಚಟುವಟಿಕೆ ಇನ್ನಷ್ಟು ಹೆಚ್ಚು ಮಾಡಿವೆ’ ಎಂದು ಹೇಳಿದರು.

‘ಸಿಮಿ’ ನಿಷೇಧವಾದ ಬಳಿಕ ಬೇರೆ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಭಯೋತ್ಪಾದನಾ ಚಟುವಟಿಕೆ ಆರಂಭಿಸಿವೆ. ಪಿಎಫ್‌ಐ, ಎಸ್‌ಡಿಪಿಐ ವಿದೇಶಿ ಭಯೋತ್ಪಾದಕ ಸಂಘಟನೆಗಳ ಜತೆಗೂ ನಂಟು ಹೊಂದಿವೆ ಎಂದರು.

ಇನ್ನು ಈ ಸಂಘಟನೆ ನಿಷೇಧ ಮಾಡುವ ಕುರಿತು ನಾಳೆ ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದೆ ಪ್ರಸ್ತಾಪ ಸಲ್ಲಿಸಲು ಕೂಡ ಸಚಿವರು ನಿರ್ಧರಿಸಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಎಸ್ಡಿಪಿಐ ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಇದೊಂದು ಉಗ್ರ ಸಂಘಟನೆಯಾಗಿದೆ ಇದನ್ನು ನಿಷೇಧಿಸಬೇಕು ಎಂದು ಬಿಜೆಪಿ ನಾಯಕರು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಒತ್ತಾಯಿಸಿದ್ದರು.

error: Content is protected !! Not allowed copy content from janadhvani.com