janadhvani

Kannada Online News Paper

ಪಾಕ್ ಮಾಜಿ ಪ್ರಧಾನಿ ಫರ್ವೇಝ್ ಮುಷರಫ್ ಮರಣದಂಡನೆ ರದ್ದು

ಲಾಹೋರ್,ಜ.13: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷಾರಫ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕ್ ನ್ಯಾಯಾಲಯವೊಂದು ರದ್ದುಗೊಳಿಸಿದೆ. ಮುಷರಫ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟು, ಶಿಕ್ಷೆಯನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ನ್ಯಾ| ಸಯದ್ ಮಜಹರ್ ಅಲಿ ಅಕ್ಬರ್ ನಖ್ವಿ, ನ್ಯಾ| ಮೊಹಮ್ಮದ್ ಅಮೀರ್ ಭಟ್ಟಿ ಮತ್ತು ನ್ಯಾ| ಚೌಧರಿ ಮಸೂದ್ ಜಹಾಂಗೀರ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ.

ಪಾಕಿಸ್ತಾನದಿಂದ ಸ್ವಯಂ ಗಡೀಪಾರಾಗಿರುವ ಫರ್ವೇಝ್ ಮುಷರಫ್ ವಿರುದ್ಧ ಪಿಎಂಎಲ್ ಪಕ್ಷ 2013ರಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿತ್ತು. 2007ರಲ್ಲಿ ಅಧ್ಯಕ್ಷರಾಗಿದ್ದಾಗ ಪರ್ವೇಜ್ ಮುಷರಫ್ ಅವರು ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿ ಪಾಕಿಸ್ತಾನದಲ್ಲಿ ತುರ್ತುಸ್ಥಿತಿ ಹೇರಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದಾದ್ಯಂತ ಅನೇಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪಿಎಂಎಲ್ ಪಕ್ಷ ದೇಶದ್ರೋಹದ ದೂರು ನೀಡಿತ್ತು. ಇಸ್ಲಾಮಾಬಾದ್ನ ವಿಶೇಷ ಕೋರ್ಟ್ನಲ್ಲಿ ಆರು ವರ್ಷಗಳ ಸುದೀರ್ಘ ವಿಚಾರಣೆ ನಡೆಯಿತು. ಡಿಸೆಂಬರ್ 17ರಂದು ಮುಷರಫ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಮುಷರಫ್ ಅವರು ಲಾಹೋರ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಪೀಠ ರಚನೆಯೇ ಅಸಂವಿಧಾನಿಕವಾಗಿರುವುದರಿಂದ ಶಿಕ್ಷೆಯನ್ನು ರದ್ದು ಮಾಡಿ ಎಂದು ಮುಷರಫ್ ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದರು. ಕೇಂದ್ರ ಸಂಪುಟದ ಅಧಿಕೃತ ಅನುಮೋದನೆ ಇಲ್ಲದೆಯೇ ವಿಶೇಷ ನ್ಯಾಯಮಂಡಳಿಯ ರಚನೆಯಾಗಿತ್ತು ಎಂಬುದು ಅವರ ವಾದ. ಇದೀಗ, ಲಾಹೋರ್ ಹೈಕೋರ್ಟ್ ಮುಷರಫ್ ಅವರ ಮನವಿಯನ್ನು ಪುರಸ್ಕರಿಸಿದ್ದು ಅವರಿಗೆ ಇಸ್ಲಾಮಾಬಾದ್ ವಿಶೇಷ ಕೋರ್ಟ್ ವಿಧಿಸಿದ ಶಿಕ್ಷೆಯನ್ನ ರದ್ದುಗೊಳಿಸಿದೆ.

error: Content is protected !! Not allowed copy content from janadhvani.com