ಬೆಂಗಳೂರು: ‘ನೆರೆ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಡಿದ್ದ ಮಾತಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೀವ್ರ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ ಎದುರಾಗಿದೆ.
‘ಇದೇ 11 ಮತ್ತು 12 ರಂದು ದೆಹಲಿಗೆ ಹೋಗಲಿದ್ದೇನೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ವಿಸ್ತರಣೆ ಮಾಡಲಿದ್ದೇನೆ’ ಎಂದು ಯಡಿಯೂರಪ್ಪನವರೇ ಹೇಳಿದ್ದರು. ಅಮಿತ್ ಶಾ ಅವರು ಭೇಟಿಗೆ ಸಮಯವನ್ನೇ ಕೊಡದಿದ್ದುದರಿಂದ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಶಾ ಗರಂ: ತುಮಕೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಮಾತನಾಡಿದ್ದ ಯಡಿಯೂರಪ್ಪ, ‘ನೆರೆಯಿಂದ ಅಪಾರ ಹಾನಿಯಾಗಿದ್ದು ಹೆಚ್ಚಿನ ಪರಿಹಾರ ನೀಡುವಂತೆ ಪ್ರಧಾನಿಗೆ ಮೂರ್ನಾಲ್ಕು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೆರೆ ಪರಿಹಾರದ ಜತೆಗೆ ₹ 50 ಸಾವಿರ ಕೋಟಿ ನೆರವು ನೀಡಿ’ ಎಂದು ಕೋರಿದ್ದರು. ಆದರೆ, ಮೋದಿ ಅವರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಪಕ್ಷದ ನಾಯಕರಿಗೆ ಮುಜುಗರ ತಂದಿತ್ತು.
‘ದೆಹಲಿ ಭೇಟಿ ನಿಮಿತ್ತ ಯಡಿಯೂರಪ್ಪ, ಅಮಿತ್ ಶಾಗೆ ಕರೆ ಮಾಡಿದ್ದರು. ಈ ವೇಳೆ ಪ್ರಾಸಂಗಿಕವಾಗಿ ವಿಷಯ ಪ್ರಸ್ತಾಪಿಸಿದ ಶಾ, ‘ನಿಮ್ಮಂತಹ ಹಿರಿಯರು ಪ್ರಧಾನಿಯವರ ಎದುರೇ ಹೀಗೆ ಮಾತನಾಡುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ಕರ್ನಾಟಕಕ್ಕೆ ಏನು ಕೊಡಬೇಕು, ಯಾವಾಗ ಕೊಡಬೇಕು ಎಂಬುದು ಗೊತ್ತಿದೆ. ನೀವು ನನ್ನನ್ನೇ ಭೇಟಿಯಾಗಿ ನೆರವು ಕೇಳಬಹುದಿತ್ತು. ನಿಮ್ಮ ನಡವಳಿಕೆಯಿಂದ ಅನಗತ್ಯ ಗೊಂದಲ ಸೃಷ್ಟಿಯಾಯಿತು’ ಎಂದು ಸಿಡಿಮಿಡಿಗೊಂಡರು. ದೆಹಲಿ ಭೇಟಿಯ ಬಗ್ಗೆ ಪ್ರಸ್ತಾಪಿಸಿದಾಗ ಶಾ ಸ್ಪಂದಿಸಲಿಲ್ಲ’ ಎಂದು ಮೂಲಗಳು ಹೇಳಿವೆ.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಯಡಿಯೂರಪ್ಪ, ‘ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಲಿದ್ದಾರೆ. ಆ ವೇಳೆ ಸಮಯಾವಕಾಶ ಮಾಡಿಕೊಂಡು ಸಂಪುಟ ವಿಸ್ತರಣೆ ಬಗ್ಗೆ ಅವರ ಜತೆ ಚರ್ಚಿಸುವೆ. ಸಾಧ್ಯವಾದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವೆ’ ಎಂದು ಹೇಳಿದ್ದಾರೆ.
ಮತ್ತೆ ವಿಳಂಬ: ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಮಾರನೇ ದಿನವೇ ಪಕ್ಷದ ಅಧ್ಯಕ್ಷರನ್ನು ಭೇಟಿ ಚರ್ಚಿಸುವ ಇರಾದೆ ಯಡಿಯೂರಪ್ಪ ಅವರದ್ದಾಗಿತ್ತು. ರಾಜೀನಾಮೆ ಕೊಡುವ ಮೂಲಕ ಮೈತ್ರಿ ಸರ್ಕಾರ ಉರುಳಿಸಲು ನೆರವಾದವರ ಪೈಕಿ ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಲ್ಲಿ ಕನಿಷ್ಠ 9 ಜನರನ್ನಾದರೂ ಸಂಪುಟಕ್ಕೆ ಸೇರಿಸಿಕೊಳ್ಳುವ ಅಪೇಕ್ಷೆಯೂ ಅವರಲ್ಲಿತ್ತು. ಮೊದಲು ಅಮಿತ್ ಶಾ ಭೇಟಿ ಸಾಧ್ಯವಾಗದೇ, ಬಳಿಕ ಶೂನ್ಯಮಾಸ ಬಂದಿದ್ದರಿಂದಾಗಿ ವಿಸ್ತರಣೆ ವಿಳಂಬವಾಗಿತ್ತು.
ಇದೇ 15ಕ್ಕೆ ಶೂನ್ಯಮಾಸ ಮುಗಿಯಲಿದ್ದು, ಬಳಿಕ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆ ಆಕಾಂಕ್ಷಿಗಳಲ್ಲಿತ್ತು. ಅಮಿತ್ ಶಾ 18ರಂದು ರಾಜ್ಯಕ್ಕೆ ಬಂದರೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಮಯ ಕೊಡಬೇಕು. ಆ ಬಗ್ಗೆ ಪ್ರಸ್ತಾಪಿಸಲು ಅವಕಾಶವಾಗದೇ ಇದ್ದರೆ ಮತ್ತೆ ದೆಹಲಿಗೆ ಹೋಗಿ ಒಪ್ಪಿಗೆ ಪಡೆದು ಬರುವವರೆಗೂ ವಿಸ್ತರಣೆ ನಡೆಯುವುದು ಕಷ್ಟ’ ಎಂದು ಬಿಜೆಪಿ ಮೂಲಗಳು ಹೇಳಿವೆ.
‘ಅಮಿತ್ ಶಾ ಅವರು ಭೇಟಿಗೆ ಸಮಯ ಕೊಟ್ಟಿಲ್ಲ. ಹಾಗಾಗಿ ದೆಹಲಿಗೆ ಹೋಗಿಲ್ಲ. ಇದೇ 18ಕ್ಕೆ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರಲಿದ್ದು, ಆಗ ಚರ್ಚೆ ಮಾಡುವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.