ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದ್ದು, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಮ ಹಾಗೂ ವಿಭಜನೆಯ ಕಾನೂನು. ಭಾರತೀಯ ಜನರನ್ನು ಧಾರ್ಮಿಕ ನೆಲೆಗಟ್ಟಿನ ಮೇಲೆ ವಿಭಜಿಸುವ ಈ ಕಾನೂನಿನ ಕೆಟ್ಟ ಉದ್ದೇಶ ದೇಶದ ಪ್ರತಿಯೊಬ್ಬ ದೇಶಭಕ್ತ, ಸಹಿಷ್ಣು ಹಾಗೂ ಜಾತ್ಯತೀಯ ನಾಗರಿಕನಿಗೂ ಅರಿವಾಗಿದೆ ಎಂದು ಹೇಳಿದರು.‘
ದೇಶದಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿ ಸೋನಿಯಾ ಗಾಂಧಿ, ಹೊಸ ಪೌರತ್ವ ಕಾನೂನಿನ ಅನುಷ್ಠಾನದಿಂದಾಗುವ ಗಂಭೀರ ಹಾನಿಯನ್ನು ಸಾವಿರಾರು ಯುವಕ-ಯುವತಿಯರು ವಿಶೇಷವಾಗಿ ವಿದ್ಯಾರ್ಥಿಗಳು ಅರಿತುಕೊಂಡಿದ್ದಾರೆ. ಈ ಕಾರಣದಿಂದಾಗಿ ಇಂದು ದೇಶವ್ಯಾಪಿ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ ಎಂದರು.
ಕೆಲವು ರಾಜ್ಯಗಳ ಪರಿಸ್ಥಿತಿ ಆತಂಕಕಾರಿಯಾಗಿದೆ. ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ದೆಹಲಿಯನ್ನು ಪೊಲೀಸ್ ರಾಜ್ಯಗಳಾಗಿ ಪರಿವರ್ತಿಸಲಾಗುತ್ತಿದೆ. ಉತ್ತರಪ್ರದೇಶದ ಅನೇಕ ಪಟ್ಟಣಗಳಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ, ಜೆಎನ್ಯು, ಬನಾರಸ್ ಹಿಂದು ವಿವಿ, ಅಲಹಾಬಾದ್ ವಿವಿ, ಗುಜರಾತ್ ವಿಶ್ವವಿದ್ಯಾಲಯ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿತಿಮೀರಿದ ಪೊಲೀಸರು ಮತ್ತು ದಾಳಿಕೋರರನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ನಾವು ದಿಗಿಲುಗೊಂಡಿದ್ದೇವೆ ಎಂದು ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿ, ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಉನ್ನತ ಆಯೋಗ ರಚಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿದ ಸೋನಿಯಾ ಗಾಂಧಿ ಅವರು, ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತಿರುವುದು ದುಃಖ ಮತ್ತು ಕಳವಳಕಾರಿ ಸಂಗತಿಯಾಗಿದೆ. ಆದರೆ, ಸರ್ಕಾರ ಮಾತ್ರ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ವಿತಂಡ ವಾದ ಮಾಡುತ್ತಿದೆ ಮತ್ತು ರಾಜತಾಂತ್ರಿಕ ಮಾರ್ಗದರ್ಶಿ ಪ್ರವಾಸಗಳನ್ನು ಆಯೋಜಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು