ಮಸ್ಕತ್,ಜ.11: ಸುಮಾರು ಐದು ದಶಕಗಳ (1970 ರಿಂದ) ದೇಶವನ್ನಾಳಿದ ಸುಲ್ತಾನ್ ಖಾಬೂಸ್ ಬಿನ್ ಸಈದ್ ಆಲ್ ಸಈದ್ ಶುಕ್ರವಾರ ತಡರಾತ್ರಿ ನಿಧನ ಹೊಂದಿದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರು ಅರಬ್ ಜಗತ್ತಿನಲ್ಲಿ ಸುಧೀರ್ಘ ಅವಧಿಯ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಬೆಲ್ಜಿಯಂನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದ ಅವರು ಕಳೆದ ತಿಂಗಳು ವಾಪಸ್ಸಾಗಿದ್ದರು. ರಾಯಲ್ ಕೋರ್ಟ್‌ನ ದಿವಾನ್ ಸುಲ್ತಾನರ ನಿಧನವಾರ್ತೆಯನ್ನು ಘೋಷಿಸಿದೆ. “ತೀವ್ರ ಶೋಕ ಮತ್ತು ವಿಷಾದದಿಂದ ಶುಕ್ರವಾರ ಕೊನೆಯುಸಿರೆಳೆದ ಸುಲ್ತಾನ್ ಖಾಬೂಸ್ ಬಿನ್ ಸಈದ್ ಅವರಿಗೆ ಆಸ್ಥಾನ ಶೋಕ ವ್ಯಕ್ತಪಡಿಸುತ್ತದೆ” ಎಂದು ಅರಮನೆಯ ಪ್ರಕಟಣೆ ಹೇಳಿದೆ.
ಅವರ ನಿಧನದ ಗೌರವಾರ್ಥ ರಾಯಲ್ ಕೋರ್ಟ್‌ನ ದಿವಾನ್ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮೂರು ದಿನಗಳವರೆಗೆ ಅಧಿಕೃತ ಕೆಲಸ ಸ್ಥಗಿತಗೊಳಿಸುವುದಾಗಿಯೂ ಮತ್ತು ಮುಂದಿನ 40 ದಿನಗಳ ಕಾಲ ರಾಷ್ಟ್ರಮಟ್ಟದಲ್ಲಿ ಅರ್ಧ- ಧ್ವಜ ಹಾರಿಸುವ ಘೋಷಣೆ ಮಾಡಿದೆ.
1970ರಲ್ಲಿ ಮಾಜಿ ಬ್ರಿಟನ್ ವಸಾಹತಿಶಾಹಿ ನೆರವಿನೊಂದಿಗೆ ರಕ್ತರಹಿತ ಕ್ರಾಂತಿಯಲ್ಲಿ ಖಬೂಸ್ ಒಮನ್ ದೊರೆಯಾಗಿ ನೇಮಕವಾಗಿದ್ದರು.ತೈಲ ಸಂಪತ್ತನ್ನು ಬಳಸಿಕೊಂಡು ಒಮಾನ್ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿದ್ದರು.
ಸುಮಾರು 50 ಮಂದಿ ಇರುವ ರಾಜ ಕುಟುಂಬ ಮಂಡಳಿಯ ಪ್ರಕಾರ, ರಾಜ್ಯದ ಪಟ್ಟ ತೆರವಾಗಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಒಳಗಾಗಿ ಹೊಸ ಸುಲ್ತಾನ್‌ರನ್ನು ಆಯ್ಕೆ ಮಾಡಬೇಕಾಗುತ್ತದೆ.
ಕುಟುಂಬ ಒಪ್ಪಿಗೆಗೆ ಬರಲು ಸಾಧ್ಯವಾಗದಿದ್ದರೆ, ರಕ್ಷಣಾ ಮಂಡಳಿಯ ಸದಸ್ಯರು ಮತ್ತು ಸುಪ್ರೀಂ ಕೋರ್ಟ್ ಅಧ್ಯಕ್ಷರು, ರಾಜತಾಂತ್ರಿಕ ಮಂಡಳಿ ಮತ್ತು ರಕ್ಷಣಾ ಮಂಡಳಿಯ ಸದಸ್ಯರು ಸುಲ್ತಾನ್ ಖಾಬೂಸ್ ಅವರು ತಮ್ಮ ಆಯ್ಕೆಯನ್ನು ದಾಖಲಿಸಿದ ರಹಸ್ಯ ಪತ್ರ ಒಳಗೊಂಡ ಲಕೋಟೆಯನ್ನು ತೆರೆದು ಆ ವ್ಯಕ್ತಿಯನ್ನು ಪಟ್ಟಕ್ಕೆ ತರಲಿದ್ದಾರೆ.
ಸುಲ್ತಾನ್ ಅವರ ಸೋದರ ಸಂಬಂಧಿಗಳಾದ ಸಂಸ್ಕೃತಿ ಸಚಿವ ಹೈತಮ್ ಬಿನ್ ತಾರಿಕ್ ಆಲ್ ಸಯೀದ್, ಉಪ ಪ್ರಧಾನಿ ಅಸಾದ್ ಬಿನ್ ತಾರಿಕ್ ಆಲ್ ಸಯೀದ್ ಮತ್ತು ಒಮನ್‌ನ ನೌಕಾಪಡೆಯ ಮಾಜಿ ಕಮಾಂಡರ್ ಹಾಗೂ ರಾಜಕುಟುಂಬದ ಸಲಹೆಗಾರ ಶಿಹಾಬ್ ಬಿನ್ ತಾರಿಕ್ ಆಲ್ ಸಯೀದ್ಶಈ ಮೂವರು ಸುಲ್ತಾನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.