ನವದೆಹಲಿ,ಜ.10: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಹೇರಿರುವ ನಿರ್ಬಂಧಗಳ ಬಗ್ಗೆ ಸುಪ್ರಿಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂಬ ಕೇಂದ್ರ ಸರ್ಕಾರ ದೇಶ ಮತ್ತು ಜಗತ್ತಿನ ಮುಂದೆ ಹೇಳುತ್ತಿದ್ದ ಸುಳ್ಳು ಜಗಜ್ಜಾಹೀರಾಗಿದೆ ಎಂದು ಸಿಪಿಐಎಂ ಪಾಲಿಟ್ ಬ್ಯೂರೋ ಹೇಳಿದೆ.
ಈ ತೀರ್ಪು ಬರುವ ಮುನ್ನಾ ದಿನ ಕೇಂದ್ರ ಸರಕಾರ ವಿದೇಶಿ ರಾಯಭಾರಿಗಳ ಒಂದು ಗುಂಪನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕರೆ ತಂದು ಪ್ರಹಸನ ನಡೆಸಿತು. ಅಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಿತು. ಆದರೆ ನ್ಯಾಯಾಲಯದ ಆದೇಶದಿಂದ ಸರ್ಕಾರದ ಸುಳ್ಳು ಬಹಿರಂಗಗೊಂಡಿದೆ ಎಂದು ಅದು ಹೇಳಿದೆ.
ರಾಯಭಾರಿಗಳ ಗುಂಪಿಗೆ ಸರಕಾರ ತೋರಿಸಿದ್ದನ್ನಷ್ಟೇ ನೋಡಬೇಕಾಗಿತ್ತು, ಹೇಳಿದ್ದನ್ನಷ್ಟೇ ಕೇಳಬೇಕಾಗಿತ್ತು. ಆದ್ದರಿಂದ ಅವರು ಯಾರೂ ಇನ್ನೂ ಜೈಲಿನಲ್ಲೇ ಇರುವ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಆಗಲಿಲ್ಲ.
ನಿರ್ಬಂಧಗಳನ್ನು ಹೇರಿದ ಐದು ತಿಂಗಳುಗಳ ನಂತರ ಈ ದೇಶದ ಜನಗಳನ್ನು ಪ್ರತಿನಿಧಿಸುವ ರಾಜಕೀಯ ಮುಖಂಡರು, ಸಂಸತ್ ಸದಸ್ಯರು ಮತ್ತು ಪಕ್ಷಗಳು ಕಾಶ್ಮೀರಕ್ಕೆ ಭೇಟಿ ನೀಡದಂತೆ ನಿಷೇಧವನ್ನೇ ಹೇರಿರುವಾಗ ಇಂತಹ ಪ್ರವಾಸ ಭಾರತದ ಸಂಸತ್ತಿಗೆ ಮಾಡಿರುವ ಅವಮಾನ ಎಂದು ಪಾಲಿಟ್ ಬ್ಯುರೊ ಹೇಳಿದೆ.