ಯಲಹಂಕ,ಜ.10: ‘ರಾಜ್ಯದಿಂದ ಈ ಬಾರಿ ಹಜ್ ಯಾತ್ರೆಗೆ ತೆರಳಲು 9,823 ಅರ್ಜಿಗಳು ಬಂದಿದ್ದು, ಈ ಪೈಕಿ, ಆನ್‌ಲೈನ್ ಲಾಟರಿ ಮೂಲಕ 6,243 ಯಾತ್ರಿಕರನ್ನು ಆಯ್ಕೆ ಮಾಡಲಾಗುತ್ತಿದೆ. ಇಷ್ಟು ಯಾತ್ರಿಕರು ಈ ಬಾರಿ ರಾಜ್ಯದಿಂದ ಹಜ್ ಯಾತ್ರೆಗೆ ತೆರಳಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಈ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಹೆಗ್ಗಡೆ ನಗರದಲ್ಲಿರುವ ಹಜ್ ಭವನದ ಹೆಚ್ಚುವರಿ ಕಾಮಗಾರಿಗಾಗಿ ₹5 ಕೋಟಿ ಅನುದಾನ ಮಂಜೂರು ಮಾಡ ಲಾಗುವುದು’ ಎಂದು ಘೋಷಿಸಿದರು.
ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೋಷನ್ ಬೇಗ್, ‘ಉತ್ತರ ಕರ್ನಾಟಕ ಭಾಗದ ಜನ ಹೈದರಾಬಾದ್ ಮೂಲಕ ಹಜ್‌ಗೆ ತೆರಳಬೇಕಾಗಿತ್ತು. ಈಗ ಕಲಬುರ್ಗಿಯಲ್ಲಿಯೇ ವಿಮಾನ ನಿಲ್ದಾಣವಾಗಿರುವುದರಿಂದ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್ ಹಾಗೂ ಬಾಗಲಕೋಟೆ ಭಾಗದವರು ಇಲ್ಲಿಂದಲೇ ನೇರವಾಗಿ ಹಜ್ ಯಾತ್ರೆಗೆ ತೆರಳಲು ವಿಮಾನ ಸೌಲಭ್ಯ ಕಲ್ಪಿಸಿ ಕೊಡಬೇಕು’ ಎಂದು ಮನವಿ ಮಾಡಿದರು.
‘ಕಲಬುರ್ಗಿಯಿಂದಲೇ ನೇರವಾಗಿ ಮೆಕ್ಕಾಗೆ ಹೋಗುವ ವ್ಯವಸ್ಥೆ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸುತ್ತೇನೆ’ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಸಚಿವ ಪ್ರಭು ಚೌಹಾಣ್, ‘ಕಲಬುರ್ಗಿಯಲ್ಲಿಯೂ ಹಜ್ ಭವನದ ನಿರ್ಮಾಣಕ್ಕಾಗಿ ಪ್ರಸ್ತುತ ವರ್ಷದ ಆಯವ್ಯಯದಲ್ಲಿ 10 ಕೋಟಿ ಅನುದಾನವನ್ನು ನಿಗದಿ ಪಡಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ’ ಎಂದರು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಉಪಸ್ಥಿತರಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ.ಮುಸ್ಲಿಮರಿಗೆ ಸಮಸ್ಯೆಯಾಗಲಾರದು- ಸಿಎಂ
‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವ ಮುಸ್ಲಿಮರಿಗೂ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಯಾರಿಗಾದರೂ ಸಮಸ್ಯೆಯಾದರೆ ಅದರ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ’ ಎಂದು ಯಡಿಯೂರಪ್ಪ ಮುಸ್ಲಿಮರಿಗೆ ಅಭಯ ನೀಡಿದರು.
‘ಕಾಯ್ದೆ ಬಗ್ಗೆ ಗೊಂದಲ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಅವರ ಮಾತುಗಳನ್ನು ಕೇಳಬೇಡಿ. ಮುಸ್ಲಿಮರ ಯಾವುದೇ ಬೇಡಿಕೆಯಿದ್ದರೂ ನಮ್ಮ ಸರ್ಕಾರ ತಕ್ಷಣ ಸ್ಪಂದಿಸಲಿದೆ’ ಎಂದು ತಿಳಿಸಿದರು.