ವಿಶ್ವಸಂಸ್ಥೆ: ಮಧ್ಯಪ್ರಾಚ್ಯದಲ್ಲಿ ಪೂರ್ಣಪ್ರಮಾಣದ ಯುದ್ಧ ನಡೆಯುವ ಹಂತಕ್ಕೆ ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಮನಗಂಡಿರುವ ಅಮೆರಿಕ ಮತ್ತು ಇರಾನ್ ದೇಶಗಳು ಒಂದು ಹೆಜ್ಜೆ ಹಿಂದೆ ಸರಿದು ಶಾಂತಿಗಾಗಿ ಪ್ರಯತ್ನಗಳನ್ನು ಆರಂಭಿಸಿವೆ. ಎರಡೂ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 51ನೇ ಪರಿಚ್ಛೇದದ ಅನ್ವಯ ಬುಧವಾರ ತಮ್ಮ ಹೇಳಿಕೆಗಳನ್ನು ದಾಖಲಿಸಿವೆ.
‘ಉದ್ವಿಗ್ನತೆ ಹೆಚ್ಚಿಸುವ ಉದ್ದೇಶ ನಮಗಿಲ್ಲ. ಹೀಗಾಗಿಯೇ ಸಾಕಷ್ಟು ಯೋಚಿಸಿ, ನಿರ್ದಿಷ್ಟವಾಗಿ ಅಮೆರಿಕದ ಸೇನಾ ನೆಲೆಗಳನ್ನು ನಮ್ಮ ದಾಳಿಗೆ ಗುರಿಯಾಗಿಸಿಕೊಂಡೆವು. ಇರಾಕ್‌ನ ಸಾರ್ವಭೌಮತೆಯನ್ನು ನಾವು ಗೌರವಿಸುತ್ತೇವೆ’ ಎಂದು ಇರಾನ್‌ನ ರಾಯಭಾರಿ ಮಜಿದ್ ತಖ್ತ್ ರವಂಚಿ ವಿಶ್ವಸಂಸ್ಥೆಗೆ ಭರವಸೆ ನೀಡಿದರು.
‘ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಗೊಳಿಸುವ ಮತ್ತು ವಿಶ್ವಶಾಂತಿ ಕಾಪಾಡುವ ಉದ್ದೇಶದಿಂದ ಇರಾನ್‌ನೊಂದಿಗೆ ಬೇಷರತ್, ಗಂಭೀರ ಮಾತುಕತೆಗೆ ಅಮೆರಿಕ ಸಿದ್ಧವಿದೆ’ ಎಂದು ಅಮೆರಿಕ ರಾಯಭಾರಿ ಕೆಲ್ಲಿ ಕ್ರಾಫ್ಟ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಮ್ಮ ದೇಶದ ಪರವಾಗಿ ಲಿಖಿತ ಪ್ರತಿಕ್ರಿಯೆ ದಾಖಲಿಸಿದರು.
ಮೊದಲು ಏಟು ನಮ್ಮದಾಗಿರಲಿಲ್ಲ: ಅಮೆರಿಕ
ಇರಾನ್‌ನ ಸೇನಾಧಿಕಾರಿ ಖಾಸಿಂ ಸುಲೇಮಾನಿ ಹತ್ಯೆಯನ್ನು ವಿಶ್ವಸಂಸ್ಥೆಯಲ್ಲಿ ಸಮರ್ಥಿಸಿಕೊಂಡಿರುವ ಅಮೆರಿಕ, ‘ನಮ್ಮ ಪ್ರಜೆಗಳು ಮತ್ತು ದೇಶದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಕ್ರಮಗಳನ್ನು ಜರುಗಿಸುವ ಹಕ್ಕು ಕಾಯ್ದಿರಿಸಿಕೊಂಡಿದ್ದೇವೆ’ ಎಂದು ಹೇಳಿತು.
‘ಕಳೆದ ಕೆಲ ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಭದ್ರತಾ ಪಡೆಗಳು ಮತ್ತು ಹಿತಾಸಕ್ತಿಗಳ ಮೇಲೆ ಇರಾನ್ ಮತ್ತು ಇರಾನ್ ಬೆಂಬಲಿತ ಬಂಡುಕೋರರ ಗುಂಪುಗಳು ದಾಳಿ ನಡೆಸುತ್ತಿದ್ದವು. ಇಂಥ ದಾಳಿಗಳನ್ನು ಸಂಘಟಿಸುವ ಅಥವಾ ಬೆಂಬಲಿಸುವ ಕೆಲಸ ಮಾಡದಂತೆ ಇರಾನ್ ದೇಶವನ್ನು ತಡೆಯುವುದು ಮತ್ತು ಅದರ ದಾಳಿ ಸಾಮರ್ಥ್ಯ ಕುಂದಿಸುವ ಉದ್ದೇಶದಿಂದ ಅಮೆರಿಕ ಸುಲೇಮಾನಿ ಹತ್ಯೆಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು’ ಎಂದು ಅಮೆರಿಕ ರಾಯಭಾರಿ ಕ್ರಾಫ್ಟ್ ವಿವರಣೆ ನೀಡಿದರು.
‘ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಗೊಳಿಸಲು ಮತ್ತು ವಾತಾವರಣ ತಿಳಿಗೊಳಿಸಲು ಇರಾನ್ ಜೊತೆಗೆ ಬೇಷರತ್, ಗಂಭೀರ ಮಾತುಕತೆಗೆ ನಾವು ಸಿದ್ಧ’ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಾಂತಿ ಕಾಪಾಡಲು ಬದ್ಧ: ಇರಾನ್: ಅಮೆರಿಕಕ್ಕೂ ಮೊದಲೇ ವಿಶ್ವಸಂಸ್ಥೆಯಲ್ಲಿ ತನ್ನ ಹೇಳಿಕೆ ದಾಖಲಿಸಿದ್ದ ಇರಾನ್, ‘ಉದ್ವಿಗ್ನತೆ ಹೆಚ್ಚಿಸುವ ಉದ್ದೇಶ ಟೆಹರಾನ್‌ಗೆ ಇಲ್ಲ’ ಎಂದು ಸ್ಪಷ್ಟಪಡಿಸಿತು.
‘ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ನಾವು ದಾಳಿ ನಡೆಸಿದೆವು. ಈ ಕಾರ್ಯಾಚರಣೆಯಲ್ಲಿ ಇರಾಕ್ ನಾಗರಿಕರಿಗೆ ಮತ್ತು ನಾಗರಿಕ ಆಸ್ತಿಗಳಿಗೆ ಯಾವುದೇ ಹಾನಿ ಆಗದಂತೆ ಎಚ್ಚರ ವಹಿಸಿದ್ದೆವು’ ಎಂದು ಇರಾನ್ ರಾಯಭಾರಿ ಮಜಿದ್ ತಖ್ತ್ ರವಂಚಿ ಭದ್ರತಾ ಮಂಡಳಿಗೆ ತಿಳಿಸಿದರು. ‘ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ನಮ್ಮ ಜನರ ಜೀವ, ದೇಶದ ಸಾರ್ವಭೌಮತೆ, ಒಗ್ಗಟ್ಟು ಮತ್ತು ಗಡಿಗಳ ಸುರಕ್ಷೆಯನ್ನು ಕಾಪಾಡಿಕೊಳ್ಳಲು ಇರಾನ್ ಬದ್ಧವಾಗಿದೆ. ತನ್ನ ವಿರುದ್ಧ ನಡೆಯುವ ಮಿಲಿಟರಿ ದಾಳಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಹಕ್ಕನ್ನು ಇರಾನ್ ಕಾಯ್ದಿರಿಸಿಕೊಂಡಿದೆ. ಇರಾಕ್‌ನ ಸಾರ್ವಭೌಮತೆಯನ್ನೂ ಇರಾನ್ ಗೌರವಿಸುತ್ತದೆ’ ಮಜೀದ್ ತಖ್ತ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
51ನೇ ಪರಿಚ್ಛೇದದ ಉಲ್ಲೇಖ: ಎರಡೂ ದೇಶಗಳು ತಮ್ಮ ಪತ್ರಗಳಲ್ಲಿ ವಿಶ್ವಸಂಸ್ಥೆಯ 51ನೇ ಪರಿಚ್ಛೇದ ಉಲ್ಲೇಖಿಸಿರುವುದು ಗಮನಾರ್ಹ ಅಂಶ. ಈ ನಿಯಮದ ಪ್ರಕಾರ ಯಾವುದೇ ರಾಷ್ಟ್ರ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸಿದ ಕಾರ್ಯಾಚರಣೆ ಅಥವಾ ತೆಗೆದುಕೊಂಡ ಕ್ರಮಗಳ ಬಗ್ಗೆ ‘ತಕ್ಷಣ’ 15 ಸದಸ್ಯರ ಭದ್ರತಾ ಮಂಡಳಿಗೆ ಮಾಹಿತಿ ನೀಡಬೇಕು.
ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರ ವಿರುದ್ಧ 2014ರಲ್ಲಿ ಕ್ರಮ ಜರುಗಿಸಿದಾಗಲೂ ಅಮೆರಿಕ ವಿಶ್ವಸಂಸ್ಥೆಯ 51ನೇ ಪರಿಚ್ಛೇದದ ಅನ್ವಯ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿತ್ತು.