ವಾಷಿಂಗ್ಟನ್ ,ಜನವರಿ. 08; ಇರಾಕ್ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಬುಧವಾರ ಬೆಳಗ್ಗೆ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕನಿಷ್ಠ 80 ಜನ ಅಮೆರಿಕದ ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿತ್ತು. ಇದಾದ ಬಳಿಕ ಇಂದು ಸಂಜೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ದಾಳಿಯಲ್ಲಿ ಅಮೆರಿಕ ಅಥವಾ ಇರಾಕ್ ದೇಶದ ಯಾವೊಬ್ಬ ಯೋಧರೂ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಳೆದ ಜನವರಿ 3 ರಂದು ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಡ್ರೋನ್ ದಾಳಿ ನಡೆಸಿದ್ದ ಅಮೆರಿಕ ಸೇನೆ ಇರಾನ್ ದೇಶದ ರಕ್ಷಣಾ ಮುಖ್ಯಸ್ಥ ಖಾಸಿಂ ಸಲೈಮಾನಿಯವರನ್ನು ಹತ್ಯೆ ಮಾಡಿತ್ತು. ಈ ಹತ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅಲ್ಲದೆ, ಈ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಕೊಲ್ಲಿ ರಾಷ್ಟ್ರದಲ್ಲಿ ಯುದ್ಧದ ಛಾಯೆ ಆವರಿಸಿತ್ತು.
ಇದಕ್ಕೆ ಇಂಬು ನೀಡುವಂತೆ ಇಂದು ಬೆಳಗ್ಗೆ ಇರಾನ್ ಸೇನೆ ಇರಾಕ್ನಲ್ಲಿರುವ ಅಮೆರಿಕದ 2 ವಾಯುಸೇನಾ ನೆಲೆಗಳ ಮೇಲೆ 22 ಕ್ಷಿಪಣಿ ದಾಳಿ ಸಂಘಟಿಸಿತ್ತು. ಈ ಸುದ್ದಿ ಇಂದು ಬೆಳಗ್ಗಿನಿಂದ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು, ದಾಳಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಅಮೆರಿಕ ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರ ಘೋಷಿಸಿತ್ತು.
ಆದರೆ, ಇಂದಿನ ಮಹತ್ವದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಂಪ್, “ಇರಾನ್ ದಾಳಿಯಲ್ಲಿ ಅಮೆರಿಕ ಹಾಗೂ ಇರಾಕ್ ದೇಶದ ಯಾವೊಬ್ಬ ಸೈನಿಕರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಅಮೆರಿಕ ಪ್ರಜೆಗಳಿಗೂ ಯಾವುದೇ ಹಾನಿಯಾಗಿಲ್ಲ. ಆದರೆ, ದೇಶದ ವಾಯುನೆಲೆಗಳಿಗೆ ಮಾತ್ರ ಸಣ್ಣ ಪುಟ್ಟ ಹಾನಿಯಾಗಿದೆ” ಎಂದು ತಿಳಿಸಿದ್ದಾರೆ.
ಇನ್ನೂ ಇರಾನ್ ದಾಳಿ ನಡೆಸಿದ ಬೆನ್ನಿಗೆ ಅಮೆರಿಕ ತೈಲ ರಾಷ್ಟ್ರದ ಮೇಲೆ ಯುದ್ಧ ಘೋಷಿಸಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಇದಕ್ಕೂ ಉತ್ತರ ನೀಡಿರುವ ಟ್ರಂಪ್, “ಅಮೆರಿಕ ಶಾಂತಿಪ್ರಿಯ ರಾಷ್ಟ್ರ. ಶಸ್ತ್ರಾಸ್ತ್ರಗಳು ಇವೆ ಎಂಬ ಕಾರಣಕ್ಕೆ ಯಾವ ದೇಶದ ಮೇಲೂ ಅದನ್ನು ಪ್ರಯೋಗಿಸುವುದಿಲ್ಲ. ಖಾಸಿಂ ಸುಲೈಮಾನಿ ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದ್ದ. ಅಲ್ಲದೆ, ಅಮೆರಿಕದ ಭದ್ರೆತೆಗೆ ಬೆದರಿಕೆ ಒಡ್ಡಿದ್ದ ಹೀಗಾಗಿ ಆತನನ್ನು ಕೊಲ್ಲುವುದು ಅನಿವಾರ್ಯವಾಗಿತ್ತು.
ಇದೀಗ ಇರಾನ್ ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಬಿಕ್ಕಟ್ಟನ್ನು ಇಲ್ಲಿಗೆ ನಿಲ್ಲಿಸಿದರೆ ಸೂಕ್ತ ಇಲ್ಲದಿದ್ದರೆ ಮುಂದೆ ಆಗಬಹುದಾದ ಪರಿಣಾಮಗಳಿಗೆ ನಾನು ಹೊಣೆ ಅಲ್ಲ” ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, “ತಾನು ಅಮೆರಿಕದ ಅಧ್ಯಕ್ಷನಾಗಿರುವವರೆಗೆ ಇರಾನ್ ದೇಶ ಅಣುಶಕ್ತಿಯನ್ನು ಹೊಂದುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ಆ ಮೂಲಕ ಯುದ್ಧದ ಭೀತಿಯನ್ನು ದೂರ ಮಾಡಿದ್ದಾರೆ.