ವಾಷಿಂಗ್ಟನ್, ಜ.7 :ಅಮೆರಿಕದ ವಾಯುದಾಳಿಯಿಂದ ಇರಾನಿನ ಮೇಜರ್ ಜನರಲ್ ಖಾಸಿಮ್ ಸುಲೈಮಾನಿ ಹತ್ಯೆಯಾದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಮಧ್ಯೆಯೇ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಜೊತೆ ಸೌದಿ ಉಪ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ಮಾತುಕತೆ ನಡೆಸಿದ್ದಾರೆ.
ಯುದ್ಧಕ್ಕೆ ಮುಂದಾಗದಂತೆ ಯುಎಸ್ ಅನ್ನು ಸೌದಿ ಅರೇಬಿಯಾ ಒತ್ತಾಯಿಸಿದ್ದು, ಇರಾನ್ ಜೊತೆ ಯುದ್ಧವನ್ನು ಅಮೆರಿಕ ಬಯಸುವುದಿಲ್ಲ ಎಂದು ಪೊಂಪಿಯೋ ಬರವಸೆ ನೀಡಿದ್ದಾರೆ.
ಯುಎಸ್ ರಕ್ಷಣಾ ಕಾರ್ಯದರ್ಶಿ ಮೈಕ್ ಎಸ್ಪರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯೆನ್ ಅವರೊಂದಿಗೂ ಸೌದಿ ಉಪ ರಕ್ಷಣಾ ಸಚಿವರು ಚರ್ಚಿಸಿದ್ದಾರೆ.
ಬಾಗ್ದಾದ್‌ನಲ್ಲಿ ಶುಕ್ರವಾರ ಕುದ್ಸ್ ಫೋರ್ಸ್ ಆಫ್ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಯ ಕಮಾಂಡರ್ ಖಾಸಿಮ್ ಸುಲೈಮಾನಿ ಹತ್ಯೆಯ ಬಗ್ಗೆ ಸೌದಿ ಉಪ ರಕ್ಷಣಾ ಸಚಿವರೊಂದಿಗೆ ಪೊಂಪಿಯೊ ಚರ್ಚಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್ ಜೊತೆ ಯುದ್ಧವನ್ನು ಅಮೆರಿಕ ಬಯಸುವುದಿಲ್ಲ ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸಲು ಬದ್ಧವಾಗಿದೆ ಎಂದು ಕಾರ್ಯದರ್ಶಿ ಒತ್ತಿಹೇಳಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ವಿದೇಶದಲ್ಲಿ ಅಮೆರಿಕದ ಅಧಿಕಾರಿಗಳನ್ನು ರಕ್ಷಿಸಲು ನಿರ್ಣಾಯಕ ಕ್ರಮ ತೆಗೆದುಕೊಳ್ಳುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನಿರ್ಧಾರವನ್ನು ಪೊಂಪಿಯೊ ಚರ್ಚಿಸಿದ್ದಾರೆ ಎಂದು ಯು.ಎಸ್. ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಸೌದಿ ಅರೇಬಿಯಾವನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಇರಾನಿನ ಆಡಳಿತದ ಬೆದರಿಕೆಯನ್ನು ಎದುರಿಸಲು ಅಮೆರಿಕದೊಂದಿಗೆ ಕೈಜೋಡಿಸಿದ್ದಕ್ಕಾಗಿ ಪೊಂಪಿಯೊ ಸಚಿವರಿಗೆ ಧನ್ಯವಾದ ಅರ್ಪಿಸಿದರು.