janadhvani

Kannada Online News Paper

ಇರಾನ್ ಮೇಲೆ ದಾಳಿಯಿಲ್ಲ: ಟ್ರಂಪ್- ಪೆಂಟಗಾನ್ ಮುಖ್ಯಸ್ಥರ ಮಧ್ಯೆ ಭಿನ್ನಮತ ಸ್ಪೋಟ

ವಾಷಿಂಗ್ಟನ್,ಜ.07: ಅಮೆರಿಕ ಮತ್ತು ಇರಾನ್ ನಡುವಿನ ಧ್ವೇಷವು ತಾರಕಕ್ಕೇರುತ್ತಿದ್ದಂತೆಯೇ. ಇರಾನ್ನ ಸಾಂಸ್ಕೃತಿಕ ತಾಣಗಳ ಮೇಲೆ ಅತೀ ಶೀಘ್ರದಲ್ಲಿ ದಾಳಿ ನಡೆಸುವ ಮಾತುಗಳನ್ನಾಡಿದ ಡೊನಾಲ್ಡ್ ಟ್ರಂಪ್ ಗೆ ವಿರುದ್ಧವಾಗಿ ಯುಎಸ್ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ “ಅಮೆರಿಕಾ ಸೇನೆಯು ಇರಾನ್ನ ಸಾಂಸ್ಕೃತಿಕ ತಾಣಗಳ ಮೇಲೆ ದಾಳಿ ನಡೆಸುವುದಿಲ್ಲ,” ಎಂದು ಹೇಳಿದ್ದಾರೆ. “ಇದೊಂದು ಶಸ್ತ್ರಾಸ್ತ್ರ ಸಂಘರ್ಷ. ನಾವು ಈ ಸಂಘರ್ಷದ ಕಾನೂನು ಉಲ್ಲಂಘನೆ ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತನ್ನ ಮತ್ತು ಟ್ರಂಪ್ ನಡುವಿನ ಅಸಮಾಧಾನ ಬಹಿರಂಗೊಂಡಿದೆ.

ಪೆಂಟಾಗನ್ ಪ್ರದೇಶದಲ್ಲಿರುವ ಯುಎಸ್ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಎಸ್ಪರ್, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇರಾನ್ನ ಸಾಂಸ್ಕೃತಿಕ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಎಸ್ಪರ್ ಉತ್ತರ ಹೀಗಿತ್ತು. “ನಾವು ಶಸ್ತ್ರಾಸ್ತ್ರ ಸಂಘರ್ಷ ಕಾನೂನು ಪಾಲನೆ ಮಾಡಲಿದ್ದೇವೆ. ಯಾವುದೇ ಕಾರಣಕ್ಕೂ ದಾಳಿ ನಡೆಸುವುದಿಲ್ಲ,” ಎಂದು ಪುನರುಚ್ಚರಿಸಿದರು.

ಈ ಹಿಂದೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ ದೇಶದ ಸೇನಾ ಜನರಲ್ ಖಾಸಿಂ ಸುಲೈಮಾನಿ ಹತ್ಯೆಯಾಗಿದ್ದರು. ಈ ಉದ್ವಿಗ್ನತೆಗಳ ಮಧ್ಯೆಯೇ ಟ್ರಂಪ್ ಮತ್ತು ಪೆಂಟಗಾನ್ ಮುಖ್ಯಸ್ಥರ ನಡುವೆ ಒಡಕು ಮೂಡಿದೆ ಎನ್ನುತ್ತಿವೆ ಮೂಲಗಳು.

ಒಮ್ಮೆ ನಮ್ಮ ಮೇಲೆ ದಾಳಿ ನಡೆಸಿದರೆ, ಇರಾನ್ನ ಪ್ರಮುಖ ಪ್ರದೇಶಗಳ ಮೇಲೆ ನಾವು ಪ್ರತಿದಾಳಿ ನಡೆಸಲಿದ್ದೇವೆ. ಸಾಂಸ್ಕೃತಿಕ ಶ್ರೀಮಂತ ನಗರಗಳು ಸೇರಿದಂತೆ 52 ಸ್ಥಳಗಳ ಮೇಲೆ ದೊಡ್ಡ ಪ್ರಮಾಣದಲ್ಲೇ ದಾಳಿ ನಡೆಸಲಿದ್ದೇವೆ. ನಂತರ ಅಮೆರಿಕಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದ್ದರು.

ಪ್ರಸ್ತುತ ಅಮೆರಿಕಾ ಮತ್ತು ಇರಾನ್ ನಡುವೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ತನ್ನ ದೇಶದ ಜನರಲ್ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆಗೆ ಕಾರಣವಾದ ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಸಂಚು ಹೂಡುತ್ತಿದೆ. ಅದಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆ ತೆಗೆಯುವವರಿಗೆ 575 ಕೋಟಿ ರೂ. ಬಹುಮಾನ ನೀಡಲಿದ್ದೇವೆ ಎಂದು ಇರಾನ್ ಸರ್ಕಾರ ಘೋಷಿಸಿದೆ.

error: Content is protected !! Not allowed copy content from janadhvani.com