ದುಬೈ: ವೀಸಾ ನೀತಿಯಲ್ಲಿ ಹೊಸ ಕ್ರಾಂತಿಗೆ ಯುಎಇ ಸಿದ್ಧವಾಗಿದ್ದು, ಹಲವು ಬಾರಿ ಎಕ್ಸಿಟ್ ಮತ್ತು ರೀ ಎಂಟ್ರಿ ಸೌಲಭ್ಯವಿರುವ ಐದು ವರ್ಷಗಳ ಸಂದರ್ಶಕ ವೀಸಾವನ್ನು ಹೊಸ ವರ್ಷದ ಮೊದಲ ಕ್ಯಾಬಿನೆಟ್ ಸಭೆ ಪ್ರಸ್ತಾಪಿದೆ. ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶೀದ್ ಅಲ್ ಮಕ್ತೂಮ್ ಹೊಸ ವೀಸಾ ಘೋಷಿಸಿದ್ದಾರೆ.
2020 ಅನ್ನು ಯುಎಇ ವಿನೂತನ ವರ್ಷವಾಗಿ ಮಾರ್ಪಡಿಸಲಿದೆ ಮತ್ತು ಮುಂದಿನ 50 ವರ್ಷಗಳ ತಯಾರಿಗಾಗಿ ಯುಎಇ ಸಜ್ಜುಗೊಳ್ಳಲಿದೆ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಈ ವೀಸಾ ಸೌಲಭ್ಯವು ಎಲ್ಲಾ ದೇಶದವರಿಗೆ ಲಭ್ಯವಿದೆ. ಯೋಜನೆಯು ವಿಶ್ವ ಪ್ರವಾಸೋದ್ಯಮ ನಕ್ಷೆಯ ಉತ್ಕೃಷ್ಟತೆಯನ್ನು ಬಲಪಡಿಸಲು ಸಹಾಯ ಮಾಡಲಿದೆ ಎಂದವರು ತಿಳಿಸಿದ್ದಾರೆ.
ಕಳೆದ ವರ್ಷ ಯುಎಇ ಹಲವು ವೀಸಾ ಯೋಜನೆಯನ್ನು ಜಾರಿಗೆ ತಂದಿತ್ತು. ಆ ಮೂಲಕ ಸಂದರ್ಶಕರು, ಹೂಡಿಕೆದಾರರು ಮತ್ತು ಪ್ರತಿಭೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದ್ದವು. ಯುಎಇ ವಿಧವೆಯರು ಮತ್ತು ಯುದ್ಧ ವಲಯಗಳಲ್ಲಿನ ನಾಗರಿಕರಿಗೆ ವಿಶೇಷ ಬೆಂಬಲ ವೀಸಾಗಳನ್ನು ಒದಗಿಸುತ್ತಿದ್ದು, ಮಾನವೀಯ ಪರಿಗಣನೆಗೆ ಒತ್ತು ನೀಡುತ್ತದೆ.