ಟೆಹರಾನ್: ಅಮೆರಿಕದ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕೋರ್‌ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸುಲೈಮಾನ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ 35ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಸುಲೈಮಾನ್ ಮೃತದೇಹವನ್ನು ಅಂತ್ಯಕ್ರಿಯೆಗೆಂದು ಅವರ ಹುಟ್ಟೂರಾದ ಕೆರ್ಮನ್‌ಗೆ ಮಂಗಳವಾರ ಮೆರವಣಿಗೆಯಲ್ಲಿ ತರಲಾಗಿದೆ. ಈ ವೇಳೆ ನೂಕುನುಗ್ಗಲು ಉಂಟಾಗಿದೆ. ‘ಅಂತಿಮ ಯಾತ್ರೆ ವೇಳೆ ಅನೇಕರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಇರಾನ್ ತುರ್ತು ಸೇವೆಗಳ ಮುಖ್ಯಸ್ಥ ಪಿರ್‌ಹೋಸಿನ್ ಕೂಲಿವಾಂಡ್ ತಿಳಿಸಿದ್ದಾರೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸುಲೇಮಾನಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಇಂದಿಗೆ ಮೂರು ದಿನಗಳ ಶೋಕಾಚರಣೆ ಮುಕ್ತಾಯವಾಗಿದ್ದು, ಅಂತ್ಯಕ್ರಿಯೆಗಾಗಿ ಪಾರ್ಥಿವ ಶರೀರವನ್ನು ಕೆರ್ಮನ್‌ಗೆ ತರಲಾಗಿದೆ. ಖಾಸಿಂ ಸುಲೇಮಾನಿ ಅವರನ್ನು ಇರಾಕ್ ರಾಜಧಾನಿ ಬಾಗ್ದಾದ್‌ನ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕವು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿತ್ತು.