ಬಾಗ್ದಾದ್: ಇರಾಕ್‌ನಲ್ಲಿ ಯುಎಸ್ ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಇರಾಕ್ ಯುಎಸ್ ವಿರುದ್ಧ ಒತ್ತಡ ಹೇರಿದೆ. ಈ ದಾಳಿಯಲ್ಲಿ ಇರಾನ್ ಮತ್ತು ಇರಾಕ್‌ನ ಮಿಲಿಟರಿ ನಾಯಕರು ಹತರಾಗಿದ್ದರು.
ಇರಾಕಿ ಸಂಸತ್ತು ದೇಶದಲ್ಲಿ ಬೀಡುಬಿಟ್ಟಿರುವ 1,000 ಕ್ಕೂ ಹೆಚ್ಚು ಅಮೆರಿಕನ್ ಸೈನಿಕರನ್ನು ಹೊರಹಾಕುವಂತೆ ಕರೆ ನೀಡಿತು. ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಇಬ್ಬರು ಇರಾನ್ ಮಿಲಿಟರಿ ಕಮಾಂಡರ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಕಾಸಿಮ್ ಸುಲೈಮಾನಿ ಮತ್ತು ಇರಾಕಿ ಸೈನಿಕ ಅಬು ಮಹ್ದಿ ಮುಹಂದಿಸ್ ಅವರನ್ನು ಹತ್ಯೆಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.
ದಾಳಿಯ ಬಗ್ಗೆ ತನ್ನ ಖಂಡನೆ ವ್ಯಕ್ತಪಡಿಸಲು ಇರಾಕ್‌ನ ವಿದೇಶಾಂಗ ಸಚಿವಾಲಯವು ಇರಾಕ್‌ನ ಅಮೆರಿಕ ರಾಯಭಾರಿಯನ್ನು ಕರೆಸಿತು. ಅಮೆರಿಕದ ಸೈನಿಕರನ್ನು ಗಡಿಪಾರು ಮಾಡುವ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ವಿಶೇಷ ಇರಾಕಿ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿಯವರು ಈ ದಾಳಿಯನ್ನು “ರಾಜಕೀಯ ಹತ್ಯೆ” ಎಂದು ಬಣ್ಣಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಕೆಂಡಾಮಂಡಲ
ವಾಷಿಂಗ್ಟನ್: ಅಮೆರಿಕ ಸೇನಾ ಪಡೆಗಳು ದೇಶ ತೊರೆಯಬೇಕು ಎಂಬ ಇರಾಕ್ ಸಂಸತ್‌ನ ಸೂಚನೆಯಿಂದ ಕೆಂಡಾಮಂಡಲಗೊಂಡಿರುವ ಡೊನಾಲ್ಡ್ ಟ್ರಂಪ್, ಇರಾಕ್ ಮೇಲೆ ನಿರ್ಬಂಧ ಹೇರುವ ಬೆದರಿಕೆ ಹಾಕಿದ್ದಾರೆ.
ಒಂದು ವೇಳೆ ಸೇನಾ ಪಡೆಗಳು ಇರಾಕ್ ತೊರೆಯುವಂತಾದರೆ, ಅನ್ಬರ್ ಪ್ರಾಂತ್ಯದಲ್ಲಿರುವ ಮಿಲಿಟರಿ ವಾಯುನೆಲೆಗೆ ಅಮೆರಿಕ ಮಾಡಿರುವ ಖರ್ಚು ವೆಚ್ಚಗಳನ್ನು ಇರಾಕ್ ಭರಿಸಿಕೊಡಬೇಕು ಎಂದು ಹೇಳಿದ್ದಾರೆ.
‘ ಇರಾಕ್‌ನಲ್ಲಿ ನಾವು ಅತ್ಯಾಧುನಿಕ ಮತ್ತು ಅತಿ ದುಬಾರಿ ವಾಯುನೆಲೆಯನ್ನು ಹೊಂದಿದ್ದೇವೆ. ಅದನ್ನು ನಿರ್ಮಿಸಲು ಶತಕೋಟಿ ಡಾಲರ್‌ಗಳಷ್ಟು ಹಣ ವ್ಯಯಿಸಿದ್ದೇವೆ. ನನ್ನ ಸರ್ಕಾರ ಮತ್ತು ಈ ಹಿಂದಿನ ಅಮೆರಿಕ ಸರ್ಕಾರಗಳೂ ಹಣ ಖರ್ಚು ಮಾಡಿವೆ. ಇದನ್ನು ಮರುಪಾವತಿಸದೇ ನಮ್ಮ ಪಡೆಗಳು ಇರಾಕ್ ತೊರೆಯುವುದಿಲ್ಲ,’ ಎಂದು ಅವರು ಹೇಳಿದ್ದಾರೆ.
‘ಒಂದು ವೇಳೆ ಸ್ನೇಹ ಪೂರ್ವಕವಲ್ಲದ ನಡೆ ಅನುಸರಿಸಿ ಅಮೆರಿಕ ಪಡೆಗಳನ್ನು ಇರಾಕ್‌ನಿಂದ ಹೊರ ಹಾಕಿದರೆ, ಹಿಂದೆಂದೂ ನೋಡಿರದಂಥ ನಿರ್ಬಂಧವನ್ನು ಇರಾಕ್ ಮೇಲೆ ಹೇರುತ್ತೇವೆ. ಅದು ಸ್ವಲ್ಪ ಮಟ್ಟಿಗೆ ಇರಾನ್ ಮೇಲಿನ ನಿರ್ಬಂಧದಂತೇ ಇರುತ್ತದೆ,’ ಎಂದು ಅವರು ಎಚ್ಚರಿಸಿದ್ದಾರೆ.