ಹೊಸದಿಲ್ಲಿ: ಜೆಎನ್ ಯು ಕ್ಯಾಂಪಸ್ ನೊಳಕ್ಕೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ, ದಾಂಧಲೆಗೈದ ದುಷ್ಕರ್ಮಿಗಳ ತಂಡದ ಕೃತ್ಯವನ್ನು ಹಲವು ರಾಜಕೀಯ ನಾಯಕರು ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಜೆಎನ್ ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲಿನ ದಾಳಿಯು ಆಘಾತಕಾರಿ. ನಮ್ಮ ದೇಶದ ನಿಯಂತ್ರಣ ಹೊಂದಿರುವ ಫ್ಯಾಶಿಸ್ಟರು ನಮ್ಮ ವೀರ ವಿದ್ಯಾರ್ಥಿಗಳ ಧ್ವನಿಯಿಂದ ಹೆದರಿದ್ದಾರೆ” ಎಂದಿದ್ದಾರೆ.
“ನಾವು ಟಿವಿಯಲ್ಲಿ ಏನು ನೋಡುತ್ತಿದ್ದೆವೋ ಅದು ಆಘಾತಕಾರಿ. ಪೊಲೀಸರು ಏನು ಮಾಡುತ್ತಿದ್ದಾರೆ? ಪೊಲೀಸ್ ಕಮಿಷನರ್ ಎಲ್ಲಿದ್ದಾರೆ” ಎಂದು ಪ್ರಶ್ನಿಸಿ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, “ಚರ್ಚೆಗಳು, ಅಭಿಪ್ರಾಯಗಳ ಸ್ಥಳವಾಗಿದೆ, ಆದರೆ ಹಿಂಸೆಗೆ ಅವಕಾಶವಿರದ ಜೆಎನ್ ಯುನ ಭಯಾನಕ ಚಿತ್ರಗಳು. ಇಂದಿನ ಘಟನೆಯನ್ನು ಖಂಡಿಸುತ್ತೇನೆ” ಎಂದಿದ್ದಾರೆ.
ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಯೋಗೇಂದ್ರ ಯಾದವ್, “ಜೆಎನ್ ಯುಗೆ ತೆರಳುವ ಎಲ್ಲಾ ಮಾರ್ಗಗಳನ್ನು ಬ್ಲಾಕ್ ಮಾಡಿದ ದಿಲ್ಲಿ ಪೊಲೀಸರು. ಗೂಂಡಾಗಳಿಗೆ ಕ್ಯಾಂಪಸ್ ನೊಳಗೆ ಮುಕ್ತವಾಗಿ ತಿರುಗಾಡಲು ಅವಕಾಶ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದೇ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಸಂಜಯ ಬಾರು, “ನಾನು ಕ್ಯಾಂಪಸ್ ನಲ್ಲಿರುವುದಿಲ್ಲ. ನನ್ನ ಪತ್ನಿ ಅಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ವಿದ್ಯಾರ್ಥಿಗಳು ಕ್ಯಾಂಪಸ್ ನೊಳಗಿರುತ್ತಾರೆ. ಹೆದರಿರುವ ವಿದ್ಯಾರ್ಥಿಗಳು ಕರೆ ಮಾಡುತ್ತಿದ್ದಾರೆ. ಇದು ಪೂರ್ವನಿಯೋಜಿತ ದಾಳಿ” ಎಂದಿದ್ದಾರೆ.