ನವದೆಹಲಿ(ಜ.05): ಪ್ರತಿಷ್ಠಿತ ಜವಾಹರಲಾಲ್ ವಿಶ್ವವಿದ್ಯಾಲಯದ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷೆ (ಜೆಎನ್‌ಯುಎಸ್‌ಯು) ಐಶ್ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇಂದು ಭಾನುವಾರ ಸಂಜೆ ಜೆಎನ್ಯು ಕ್ಯಾಂಪನ್ನೊಳಗೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ನುಗ್ಗಿದ ಕಿಡಿಗೇಡಿಗಳು ವಿದ್ಯಾರ್ಥಿ ಸಂಘದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ.
ಜೆಎನ್ಯು ಕ್ಯಾಂಪಸ್ನಲ್ಲಿ ಶಬರಮತಿ ಹಾಸ್ಟೆಲ್ ಬಳಿ ಐಶ್ ಘೋಷ್ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು. 50ಕ್ಕೂ ಹೆಚ್ಚು ಮಂದಿ ಗೂಂಡಾಗಳ ಗುಂಪು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ವಾಹನಗಳನ್ನು ಧ್ವಂಸಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜೆಎನ್ಯು ವಿದ್ಯಾರ್ಥಿ ಸಂಘ, ಎಬಿವಿಪಿ ಕಾರ್ಯಕರ್ತರೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಘದ ಮುಖ್ಯಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಐಶ್ ಘೋಷ್ ಸ್ಥಿತಿ ಗಂಭೀರವಾಗಿದೆ. ಘೋಷ್ ಅನ್ನು ಕಿಡಿಗೇಡಿಗಳು ಹ್ಯಾಕಿ ಬ್ಯಾಟ್ಗಳಿಂದ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಸದ್ಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.