ರಿಯಾದ್: ಇರಾನಿನ ಉನ್ನತ ಸೇನಾಧಿಕಾರಿಯನ್ನು ವಧಿಸಿದ ಅಮೆರಿಕದ ಆಕ್ರಮಣದ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಪ್ರತೀಕಾರ ಮತ್ತು ಯುದ್ಧವನ್ನು ತಪ್ಪಿಸಲು ಕೊಲ್ಲಿ ರಾಷ್ಟ್ರಗಳು ಬಯಸುತ್ತಿವೆ.
ಇರಾನ್ ಮೇಲಿನ ದಾಳಿಯು ಭಯೋತ್ಪಾದನೆಯ ಪರಿಣಾಮವಾಗಿದೆ ಎಂದು ಸೌದಿ ಅರೇಬಿಯಾ ಪ್ರತಿಕ್ರಿಯಿಸಿದ್ದು, 3,000 ಸೈನಿಕರನ್ನು ಕುವೈತ್‌ಗೆ ಕಳುಹಿಸಲು ಅಮೆರಿಕ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇರಾನಿನ ಕುದ್ಸ್ ಫೋರ್ಸ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರನ್ನು ಯುಎಸ್ ಡ್ರೋನ್ ದಾಳಿಯ ಮೂಲಕ ಹತ್ಯೆಗೈದ ನಂತರ ಪಶ್ಚಿಮ ಏಷ್ಯಾ ತೀವ್ರ ಸಂಕಷ್ಟದಲ್ಲಿದೆ. ವಿಷಯಗಳನ್ನು ಯುದ್ಧಕ್ಕೆ ಹೋಗದಂತೆ ತಡೆಯುವ ರಾಜತಾಂತ್ರಿಕ ಕ್ರಮಗಳು ಈಗ ಪ್ರಗತಿಯಲ್ಲಿವೆ. ಹೆಚ್ಚಿನ ಕೊಲ್ಲಿ ರಾಷ್ಟ್ರಗಳು ಯುದ್ಧವು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಉಗ್ರವಾದ ಕುರಿತು ಸೌದಿಯು ನೀಡಿದ ಎಚ್ಚರಿಕೆಯನ್ನು ಅವಗಣಿಸಿದ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದ ಸೌದಿ ವಿದೇಶಾಂಗ ಸಚಿವ ಆದಿಲ್ ಅಲ್ ಝುಬೈರ್, ಈ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ವಿಶ್ವ ರಾಷ್ಟ್ರಗಳು ಮುಂದಾಗಬೇಕೆಂದು ಕರೆ ನೀಡಿದ್ದಾರೆ.
ಹೆಚ್ಚಿನ ಸಂಘರ್ಷಗಳಿಗೆ ಕಾರಣವಾಗದಂತೆ ವಿವೇಕದಿಂದ ಸಂಪೂರ್ಣ ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂದು ಯುಎಇ ವಿದೇಶಾಂಗ ಸಚಿವ ಡಾ.ಅನ್ವರ್ ಗರ್ಗಾಶ್ ಹೇಳಿದರು. ಖತರ್ ಮತ್ತು ಕುವೈತ್ ಯುದ್ಧವು ಊಹಿಸಲಾಗದಷ್ಟು ಹೆಚ್ಚಿನ ಹಾನಿಯನ್ನುಂಟುಮಾಡಲಿದೆ ಎಂದು ಎಚ್ಚರಿಸಿದೆ. ಶಾಂತಿಗಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಯತ್ನ ನಡೆಯಬೇಕು ಎಂದು ಬಹ್ರೈನ್ ಕರೆ ನೀಡಿದೆ.