ಬೆಂಗಳೂರರು: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾದ ಕಾರಣ ಬಿಜೆಪಿ ಜನಾಭಿಪ್ರಾಯವನ್ನು ಸಂಗ್ರಹಿಸಲು ಅಭಿಯಾನವೊಂದನ್ನು ಆರಂಭಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಪೌರತ್ವ ಕಾಯ್ದೆಯನ್ನು ಬೆಂಬಲಿಸಲು 8866288662 ನಂಬರ್ ಗೆ ಮಿಸ್ ಕಾಲ್ ನೀಡುವ ಆಂದೋಲನವೊಂದನ್ನು ಆರಂಭಿಸಿದೆ. ಈ ಸಂಖ್ಯೆಗೆ ಕರೆ ಮಾಡಿ ಸಿಎಎ ಕಾಯ್ದೆಯನ್ನು ಬೆಂಬಲಿಸಿ ಎಂದು ಬಿಜೆಪಿ ಹೇಳಿದೆ. ಆದರೆ ಈ ಆಂದೋಲನ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡೆಯಲು ಮತ್ತು ಮಿಸ್ ಕಾಲ್ ಗಳ ಸಂಖ್ಯೆಗಳನ್ನು ಹೆಚ್ಚಿಸಲು ಬಿಜೆಪಿ ಬೆಂಬಲಿಗರು ನಡೆಸಿರುವ ವಿಚಿತ್ರ ಪ್ರಯತ್ನಗಳು ಭಾರೀ ವಿವಾದಕ್ಕೊಳಗಾಗಿದೆ.
ಈಗಾಗಲೇ ಬಿಜೆಪಿ ಬೆಂಬಲಿಗರು ‘ಉಚಿತ ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಶನ್ ಪಡೆಯಲು’, ‘ಉದ್ಯೋಗಕ್ಕಾಗಿ’ ಮತ್ತು ‘ಫೋನ್ ಸೆಕ್ಸ್ ಆಪರೇಟರ್ ಗಳಿಗಾಗಿ’ ಎಂದೆಲ್ಲಾ ಬರೆದು ಬಿಜೆಪಿ ನೀಡಿರುವ ನಂಬರನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕೆಲವು ಖಾತೆಗಳು ತಾವು ‘ಪ್ರಾಂಕ್’ ಮಾಡಿದ್ದಾಗಿ ಹೇಳುತ್ತಿವೆ.
Desperate times call for desperate measures…#CAA pic.twitter.com/zzMGDyMmPP
— SamSays (@samjawed65) January 4, 2020
ಆದರೆ thewire.in ವರದಿಯಂತೆ ಇಂತಹ ಹಲವು ಟ್ವೀಟ್ ಗಳನ್ನು ಮಾಡಿರುವ ಹಲವು ಟ್ವಿಟರ್ ಖಾತೆಗಳು ಬಿಜೆಪಿ ಐಟಿ ಸೆಲ್ ಜೊತೆ ಸಂಬಂಧ ಹೊಂದಿದೆ. ಇಂತಹ ದಾರಿತಪ್ಪಿಸುವ ಟ್ವೀಟ್ ಮಾಡಿರುವ ಪ್ರಮುಖ ಟ್ವಿಟರ್ ಖಾತೆಯೊಂದನ್ನು ಸ್ವತಃ ಪ್ರಧಾನಿ ಮೋದಿಯವರೇ ಫಾಲೋ ಮಾಡುತ್ತಿದ್ದಾರೆ ಎಂದು thewire.in ವರದಿ ತಿಳಿಸಿದೆ.
ವಿನಿತಾ ಹಿಂದುಸ್ತಾನಿ ಎನ್ನುವ ಖಾತೆಯಿಂದ “ನನಗೆ ಕರೆ ಮಾಡಿ 8866288662, ನಾನೀಗ ಫ್ರೀ ಇದ್ದೇನೆ. ನಿಮ್ಮ ಕರೆಗಾಗಿ ಕಾಯುತ್ತಿದ್ದೇನೆ” ಎಂದು ಟ್ವೀಟ್ ಮಾಡಲಾಗಿದೆ.
ಶ್ರೀನಾ ಎನ್ನುವ ಖಾತೆಯು “ಇಂದು ಬೋರಾಗುತ್ತಿದೆ. ಹಾಗಾಗಿ ನನ್ನ ಫಾಲೋವರ್ ಗಳಿಗೆ ನನ್ನ ನಂಬರ್ ಶೇರ್ ಮಾಡುತ್ತಿದ್ದೇನೆ. ನನಗೆ ಕರೆ ಮಾಡಿ” ಎಂದು ಟ್ವೀಟ್ ಮಾಡಿದ್ದು, ಅದೇ ಸಂಖ್ಯೆಯನ್ನು ನೀಡಲಾಗಿದೆ.
ಚಾರ್ ಲೋಗ್ ಎನ್ನುವ ಖಾತೆಯು , “ನಿಮ್ಮ ನಗರದಲ್ಲಿ 69 ಹಾಟ್ ಸಿಂಗಲ್ ಗಳು ನಿಮ್ಮೊಂದಿಗೆ ಸೆಕ್ಸ್ ಬಯಸುತ್ತಿದ್ದಾರೆ. 8866288662 ಕರೆ ಮಾಡಿ” ಎಂದು ಬರೆದಿದೆ.
ಮುಂಬೈಕರ್ ಎನ್ನುವ ಖಾತೆಯಿಂದ, ” ಪ್ರೀತಿಯ ಎಲ್ಲರಿಗೂ, ಪ್ರಯಾಣದ ವೇಳೆ ನನ್ನ ಮೊಬೈಲ್ ಕಳೆದುಹೋಗಿದೆ. ನನ್ನ 8866288662 ನಂಬರ್ ಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುತ್ತಿಲ್ಲ. ಇದೇ ನಂಬರ್ ಗೆ ಕರೆ ಮಾಡಿ ನನ್ನ ಫೋನ್ ಹುಡುಕಲು ನೆರವಾಗಿ” ಎಂದು ಬರೆಯಲಾಗಿದೆ.
ಹಲವು ಖಾತೆಗಳಲ್ಲಿ “6 ತಿಂಗಳ ಕಾಲ ನೆಟ್ ಫ್ಲಿಕ್ಸ್ ಉಚಿತ ಸಬ್ ಸ್ಕ್ರಿಪ್ಶನ್ ಬೇಕೆ? 8866288662ಗೆ ಕರೆ ಮಾಡಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಪಡೆದುಕೊಳ್ಳಿ” ಎಂದು ಬರೆಯಲಾಗಿದೆ.
ಇನ್ನೊಂದು ಖಾತೆಯಲ್ಲಿ “ನಾನು ನಿರ್ಮಾಣ ಸಂಸ್ಥೆಯೊಂದರ ಎಚ್ಆರ್. ನಮ್ಮ ಸಂಸ್ಥೆಯು ಸದ್ಯ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. 2 ವರ್ಷಗಳ ಅನುಭವವಿರುವವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 8866288662ಗೆ ಕರೆ ಮಾಡಿ” ಎಂದು ಬರೆಯಲಾಗಿದೆ.
ನೆಟ್ ಫ್ಲಿಕ್ಸ್ ಉಚಿತ ಸಬ್ ಸ್ಕ್ರಿಪ್ಶನ್ ಗೆ ಸಂಬಂಧಿಸಿದ ಬಿಜೆಪಿ ಬೆಂಬಲಿಗರ ಸುಳ್ಳು ಪ್ರಚಾರಕ್ಕೆ ಪ್ರತಿಕ್ರಿಯಿಸಿರುವ ನೆಟ್ ಫ್ಲಿಕ್ಸ್ ಇಂಡಿಯಾ, “ಇದು ಸಂಪೂರ್ಣ ಸುಳ್ಳು” ಎಂದಿದೆ.