janadhvani

Kannada Online News Paper

ಮೋದಿಯ ತಾಯಿ, ತಾತನ ಬಳಿ ಪೌರತ್ವ ಸಾಬೀತಿಗೆ ದಾಖಲೆ ಇದೆಯೇ?

ಬೆಂಗಳೂರು : ಸಿಎಎ, ಎನ್‌ಆರ್‌ಸಿ ಪ್ರಕ್ರಿಯೆಯಿಂದ ತೊಂದರೆ ಇಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ತಾತನ(ಅಜ್ಜ) ಬಳಿ ಪೌರತ್ವ ದಾಖಲೆ ಇದೆಯೇ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಸವಾಲೆಸೆದರು.

ಶುಕ್ರವಾರ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕಾಯ್ದೆಗಳ ವಿರುದ್ಧ ಯಾರು ಹೆದರುವ ಅಗತ್ಯ ಇಲ್ಲ ಎಂದರು.

ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಮಾತು ಮಾತಿಗೂ ನಾನು ಚೌಕಿದಾರ್(ಕಾವಲುಗಾರ) ಎನ್ನುತ್ತಿದ್ದರು. ಆದರೆ, ಈಗ ಮನೆಯ ಮಾಲಕರಿಗೆ ನಿಮ್ಮ ದಾಖಲೆ ತೋರಿಸಿ ಎಂದು ಹೇಳುತ್ತಿದ್ದಾರೆ. ಹಳೇ ದಾಖಲೆ ಯಾರು ಇಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಮೊದಲು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ, ಅವರ ಕುಟುಂಬ ಸದಸ್ಯರ ದಾಖಲೆಗಳನ್ನು ಜನರ ಮುಂದೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ಅಲ್ಲ, ಭಾರತದ ಪ್ರಧಾನಿ. ಈ ಬಗ್ಗೆ ಅವರಿಗೆ ಗಮನ ಇರಬೇಕು. ಪದೇ ಪದೇ ಪಾಕಿಸ್ತಾನದಲ್ಲಿ ದೌರ್ಜನ್ಯ ನಡೆಯುತ್ತಿದೆ ಎನ್ನುತ್ತಾರೆ. ಆದರೆ, ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿಯೇ ಗೋಲಿಬಾರ್ ನಡೆಸಲಾಗಿದೆ. ಇದು ದೌರ್ಜನ್ಯವಲ್ಲವೇ ಎಂದು ಅವರು ಪ್ರಶ್ನಿಸಿದರು.

ಸಿಎಎ, ಎನ್‌ಆರ್‌ಸಿ ವಿರುದ್ಧ ದೇಶದಲ್ಲೆಡೆ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಇದರ ಬಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಟ್ಟಿದೆ. ಅವರು, ಈ ವಿವಾದಿತ ಕಾಯ್ದೆಗಳನ್ನು ಹಿಂಪಡೆಯುತ್ತಾರೆ ಎನ್ನುವ ಭರವಸೆ ನಮಗಿದೆ. ಒಂದು ವೇಳೆ, ಈ ಕಾಯ್ದೆ ಜಾರಿಯಾದರೆ, ಇದನ್ನು ತಿರಸ್ಕರಿಸುವ ಆಂದೋಲನ ರೂಪಿಸಲಾಗುವುದು ಎಂದು ಝಮೀರ್ ಅಹ್ಮದ್ ಹೇಳಿದರು.

error: Content is protected !! Not allowed copy content from janadhvani.com