ಮಂಗಳೂರು: ಕಳೆದ ತಿಂಗಳು ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ಘಟನೆ ಪೂರ್ವ ನಿರ್ಧರಿತ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್), ಆಲ್ ಇಂಡಿಯಾ ಪೀಪಲ್ಸ್ ಫೋರಂ(ಎಐಪಿಎಫ್) ಮತ್ತು ನ್ಯಾಶನಲ್ ಕಾನ್ಫಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್(ಎನ್ ಸಿಎಚ್ಆರ್ಒ) ಸಂಸ್ಥೆಗಳ ಸತ್ಯಶೋಧನಾ ತಂಡ ನೀಡಿರುವ ಮಧ್ಯಂತರ ವರದಿಯಲ್ಲಿ ಹೇಳಿವೆ.
ಪೊಲೀಸರು ಮುಸಲ್ಮಾನರ ಮೇಲೆಯೇ ದಾಳಿ ಮಾಡಿದ್ದು ಆ ಸಮುದಾಯಕ್ಕೆ ಸೇರಿದವರ ಅಂಗಡಿಗಳ ಮೇಲೆಯೇ ಗುರಿಯಾಗಿಟ್ಟುಕೊಂಡು ಮಸೀದಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ್ದಾರೆ. ಈ ಗೋಲಿಬಾರ್ ನಡೆಯುವುದಕ್ಕೆ ಒಂದು ದಿನ ಮೊದಲು ಪೊಲೀಸರು ಮರಳಿನ ಬ್ಯಾಗುಗಳು ಮತ್ತು ಗಲಭೆ ಎಬ್ಬಿಸಲು ತಯಾರಿ ಮಾಡಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಿದ್ದರು, ಇವುಗಳನ್ನೆಲ್ಲಾ ನೋಡಿದರೆ ಪೊಲೀಸರ ಕ್ರಮ ಪೂರ್ವ ನಿರ್ಧರಿತವಾಗಿತ್ತು ಎಂದು ಸ್ಪಷ್ಟವಾಗುತ್ತಿದೆ.
ಪೊಲೀಸರು ಹೇಳಿದಂತೆ 6ರಿಂದ 7 ಸಾವಿರ ಪ್ರತಿಭಟನಾಕಾರರು ಸೇರಿರಲಿಲ್ಲ, ಅಲ್ಲಿದ್ದಿದ್ದು 200ರಿಂದ 300 ಮಂದಿ ಪ್ರತಿಭಟನಾಕಾರರು ಮಾತ್ರ ಎಂದು ವರದಿಯಲ್ಲಿ ಹೇಳಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ 60-70 ವಿಡಿಯೊಗಳನ್ನು ಪರಿಶೀಲಿಸಿರುವ ತಂಡ ಆರಂಭದಲ್ಲಿ ಸುಮಾರು 150 ಜನ ಯುವಕರು ಸೇರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮಾತ್ರ ಕೂಗುತ್ತಿದ್ದರು. ಅವರನ್ನು ಪೊಲೀಸರು ಚದುರಿಸಿದರು.ಇದು ಯುವಕರನ್ನು ಕೆರಳಿಸಿ ಅನಗತ್ಯ ಗಲಾಟೆಯಾಯಿತು ಎಂದು ತಂಡ ಹೇಳಿದೆ.
ಅಂದು ಸಂಜೆ 4 ಗಂಟೆ ಹೊತ್ತಿಗೆ ಪೊಲೀಸರು ಇಬ್ರಾಹಿಂ ಖಲೀಲ್ ಮಸೀದಿ ಮೇಲೆ ದಾಳಿ ಮಾಡಿ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಸುಮಾರು 80 ಮಂದಿ ಮೇಲೆ ದಾಳಿ ಮಾಡಿದರು. ಮಸೀದಿ ಕಡೆಗೆ ಓಡುತ್ತಿದ್ದ ಯುವಕರನ್ನು ಪೊಲೀಸರು ಬೆನ್ನಟ್ಟಿ ಹೋಗಿ ದಾಳಿ ನಡೆಸಿದರು. ಸುಮ್ಮನೆ ಅಶ್ರುವಾಯು ಸಿಡಿಸಿದರು. ಈ ಸಂದರ್ಭದಲ್ಲಿ ಅಶ್ರಫ್ ಎನ್ನುವವರಿಗೆ ಗಾಯವಾಗಿ ಗುಂಪು ಕೆರಳಿ ಪರಿಸ್ಥಿತಿ ಬಿಗಡಾಯಿಸಿತು ಎಂದು ಹೇಳಿದೆ.
ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಮತ್ತು ನೌಶೀನ್ ಪ್ರತಿಭಟನೆ ಮಾಡುತ್ತಿದ್ದವರನ್ನು ನಿಂತು ನೋಡುತ್ತಿದ್ದರೇ ಹೊರತು, ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಇಲ್ಲಿ ಪೊಲೀಸರು ಮುಸಲ್ಮಾನ ಸಮುದಾಯದ ಮೇಲೆ ಪೂರ್ವಾಗ್ರಹಪೀಡಿತವಾಗಿ ವರ್ತಿಸಿ ಎಫ್ಐಆರ್ ದಾಖಲಿಸಿದೆ.
ಪೊಲೀಸ್ ಠಾಣೆ ಮೇಲೆ ಪ್ರತಿಭಟನಾಕಾರರು ಬೆಂಕಿ ಹಚ್ಚಲು ಪ್ರಯತ್ನಿಸಿದಾಗ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಹೇಳುವ ಪೊಲೀಸರ ಹೇಳಿಕೆ ನಿಜವೇ ಆಗಿದ್ದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಪಿಯುಸಿಎಲ್ ನ ರಾಜ್ಯಾಧ್ಯಕ್ಷ ವೈ ಜೆ ರಾಜೇಂದ್ರ ಒತ್ತಾಯಿಸಿದರು.