ಎರ್ನಾಕುಲಂ,ಜ.01: ಪೌರತ್ವ ತಿದ್ದುಪಡಿಕಾಯ್ದೆಯು ಮುಸ್ಲಿಂ ಸಮುದಾಯವನ್ನು ಪ್ರತ್ಯೇಕಿಸುವ ಕೇಂದ್ರ ಸರ್ಕಾರದ ಕಾರ್ಯತಂತ್ರವಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಮುಸ್ಲಿಂ ಸಮುದಾಯವನ್ನು ದೇಶದಿಂದ ಹೊರಹಾಕುವ ಅಗತ್ಯವೇನು ಎಂದು ಕಾಂತಪುರಂ ಕೇಳಿದರು. ಎರ್ನಾಕುಲಂನಲ್ಲಿ ಮುಸ್ಲಿಂ ಸಮನ್ವಯ ಸಮಿತಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ‌್ಯಾಲಿಯಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
“ಭಾರತವು ಜಾತಿ,ಧರ್ಮಕ್ಕೆ ಅತೀತವಾಗಿ ಮನುಷ್ಯನನ್ನು ಮನುಷ್ಯನಂತೆ ನೋಡುವ ವಿಶಾಲವಾದ ಸಂವಿಧಾನವನ್ನು ಹೊಂದಿರವ ದೇಶವಾಗಿದೆ. ಭಾರತದಂತೆ ವಿವಿಧ ಜಾತಿ, ಧರ್ಮ, ವೇಷ ಭಾಷೆಗಳಿರುವ ಜಾತ್ಯಾತೀತ ದೇಶ ಬೇರೆಯಿಲ್ಲ, ನಾವು ಈ ದೇಶದಲ್ಲಿ ಯಾವುದೇ ಸಂಘರ್ಷವಿಲ್ಲದೆ ಸಹಬಾಳ್ವೆಯಿಂದ ವಾಸಿಸುತ್ತಿದ್ದೇವೆ. ಕೇಂದ್ರದ ಪೌರತ್ವ ತಿದ್ದುಪಡಿ ಕಾನೂನು ಇದಕ್ಕೆ ವಿರುದ್ಧವಾಗಿದೆ. ಅದನ್ನು ಪ್ರಶ್ನಿಸುವ ಹಕ್ಕು ನಮಗಿದೆ.”ಎಂದು ಕಾಂತಪುರಂ ಹೇಳಿದರು.
ಮುಸ್ಲಿಂ ಸಮುದಾಯವು ಭಾರತದ ಸಂವಿಧಾನ ವಿರುದ್ಧ ಏನಾದರೂ ತಪ್ಪು ಮಾಡಿದೆ ಎಂದು ಯಾರಿಂದಲೂ ಸಾಬೀತುಪಡಿಸಲು ಸಾಧ್ಯವಿಲ್ಲ. ಭಾರತದಲ್ಲಿನ ಮುಸ್ಲಿಂ ಸಮುದಾಯವು ಭಾರತದ ಏಕತೆ ಎಂಬ ದೊಡ್ಡ ತತ್ವಕ್ಕೆ ವಿರುದ್ಧವಾಗಿಲ್ಲ, ಮುಸ್ಲಿಮರನ್ನು ಏಕೆ ತಿರಸ್ಕರಿಸಬೇಕಾಗಿದೆ? ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆ ಮತ್ತು ಇಬ್ಬರು ಪ್ರಧಾನ ಮಂತ್ರಿಗಳ ಹತ್ಯೆ ಭಾರತದ ಚರಿತ್ರೆಯಲ್ಲೇ ಅವಮಾನಕರ ಘಟನೆಗಳು, ಇದರ ಹಿಂದೆ ಮುಸ್ಲಿಮರು ಇದ್ದಾರೆಯೇ ಎಂದು ಕಾಂತಪುರಂ ಕೇಳಿದರು.
“ಪೌರತ್ವ ತಿದ್ದುಪಡಿ ಕಾನೂನು, ಬಡವರ ರಕ್ಷಣೆಗಾಗಿ ಎಂದು ಕೇಂದ್ರ ಹೇಳಿದೆ, ಆದರೆ ಬಡ ಮುಸ್ಲಿಮರನ್ನು ಏಕೆ ಸೇರಿಸಬಾರದು? ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದ ಅನೇಕ ಘಟನೆಗಳು ಮುಸ್ಲಿಮರನ್ನು ಪ್ರತ್ಯೇಕಿಸುವ ಗುರಿಯನ್ನು ಹೊಂದಿವೆ. ತ್ರಿವಳಿ ತ್ವಲಾಕ್ ವಿಷಯವು ಸಂಸತ್ತು ಚರ್ಚಿಸಬೇಕಾದ ವಿಷಯವಾಗಿರಲಿಲ್ಲ. ಮುಸ್ಲಿಮರನ್ನು ನಾಶಮಾಡುವುದು ಕೇಂದ್ರದ ಉದ್ದೇಶವಾಗಿದೆ” ಎಂದು ಕಾಂತಪುರಂ ಹೇಳಿದರು.
ಎರ್ನಾಕುಲಂ ಕಲೂರ್‌ನಿಂದ ಮೆರೈನ್ ಡ್ರೈವ್ ವರೆಗೆ ಜನ ಲಕ್ಷಗಳೊಂದಿಗೆ ಬೃಹತ್ ರ‌್ಯಾಲಿ ಸಾಗಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ಜನರು ಒಗ್ಗೂಡಿದಾಗ, ಕೊಚ್ಚಿನ್ ನಗರವು ಅಕ್ಷರಶಃ ಉಸಿರುಗಟ್ಟುವಂತಾಯಿತು.
ರ‌್ಯಾಲಿಯನ್ನು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಪಾನಕ್ಕಾಡ್ ಸಯ್ಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಞ್ಞಾಲಿಕುಟ್ಟಿ, ಸಮಾಜ ಸೇವಕ ಜಿಗ್ನೇಶ್ ಮೇವಾನಿ, ಯುಡಿಎಫ್ ಕನ್ವೀನರ್ ಬೆನ್ನಿ ಬಹಾನನ್, ಸೆಬಾಸ್ಟಿಯನ್ ಪಾಲ್, ಬಹಾವುದ್ದೀನ್ ನದ್ವಿ ಕೂರಿಯಾಡ್ ಹಾಗೂ ಇತರ ಮುಸ್ಲಿಂ ಸಂಘಟನೆಯ ಮುಖಂಡರು ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.