janadhvani

Kannada Online News Paper

NRC, CAA ವಿರುದ್ಧ ಮಹಾ ಒಗ್ಗಟ್ಟು: ಕೇರಳದಲ್ಲಿ ಇತಿಹಾಸ ನಿರ್ಮಿಸಿದ ಬೃಹತ್ ರ‌್ಯಾಲಿ- ಕೇಂದ್ರಕ್ಕೆ ತಾಕೀತು

ಕೊಚ್ಚಿನ್, ಎರ್ನಾಕುಲಂ,ಜ.01:ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಕೊಚ್ಚಿಯಲ್ಲಿ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ರ‌್ಯಾಲಿಯು ಹೊಸ ಇತಿಹಾಸವನ್ನು ನಿರ್ಮಿಸಿತು. ದೇಶದ ಮುಸ್ಲಿಂ ಸಮುದಾಯದ ಮೇಲೆ ಅಸ್ಪೃಶ್ಯತೆಯನ್ನು ಹೇರಲು ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ರ‌್ಯಾಲಿಯು ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಕೇರಳದ ಮುಸ್ಲಿಂ ಮುಖಂಡರು ಮತ್ತು ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಒಗ್ಗೂಡಿ ಮುಸ್ಲಿಂ ಕೈರಳಿಯ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಾಕ್ಷಿಯಾಯಿತು.

ಎರ್ನಾಕುಲಂ ಕಲೂರ್‌ನಿಂದ ಮೆರೈನ್ ಡ್ರೈವ್‌ ವರೆಗೆ ಜನ ಲಕ್ಷಗಳೊಂದಿಗೆ ಬೃಹತ್ ರ‌್ಯಾಲಿ ಸಾಗಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ಜನರು ಒಗ್ಗೂಡಿದಾಗ, ಕೊಚ್ಚಿನ್ ನಗರವು ಅಕ್ಷರಶಃ ಸ್ತಬ್ಧಗೊಂಡಿತು.

ಮರೀನ್ ಡ್ರೈವ್‌ನಲ್ಲಿ ಸಮಾರೋಪ ಸಮಾರಂಭ ಪ್ರಾರಂಭಗೊಂಡರೂ ರ‌್ಯಾಲಿಯ ಅರ್ಧದಷ್ಟು ಕೂಡ ಸಮ್ಮೇಳನ ನಗರಕ್ಕೆ ತಲುಪಿರಲಿಲ್ಲ, ಆದರೂ ಮೆರೈನ್ ಡ್ರೈವ್ ಜನಸಾಗರದಿಂದ ಉಸಿರುಗಟ್ಟುತ್ತಿತ್ತು.

ದೇಶದಲ್ಲಿ ಶಾಂತಿಯಿಂದ ವಾಸಿಸುವ ಮುಸ್ಲಿಮರನ್ನು ಹೊರಹಾಕುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ರ‌್ಯಾಲಿಯಲ್ಲಿ ನಿಸ್ಸಂದಿಗ್ಧವಾಗಿ ಘೋಷಿಸಲಾಯಿತು.ದೇಶದ ಪರಂಪರೆಯಲ್ಲಿ ಮುಸ್ಲಿಂ ಸಮುದಾಯಷಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಮೆರೈನ್ ಡ್ರೈವ್‌ನಲ್ಲಿ ನೆರೆದಿದ್ದ ಜನಸಮೂಹವು ನೆನಪಿಸಿತು.

ರ‌್ಯಾಲಿಯನ್ನು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಪಾನಕ್ಕಾಡ್ ಸಯ್ಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ನಡೆಸೀದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಞ್ಞಾಲಿಕುಟ್ಟಿ, ಸಮಾಜ ಸೇವಕ ಜಿಗ್ನೇಶ್ ಮೇವಾನಿ, ಯುಡಿಎಫ್ ಕನ್ವೀನರ್ ಬೆನ್ನಿ ಬಹಾನನ್, ಸೆಬಾಸ್ಟಿಯನ್ ಪಾಲ್, ಬಹಾವುದ್ದೀನ್ ನದ್ವಿ ಕೂರಿಯಾಡ್ ಹಾಗೂ ಇತರ ಮುಸ್ಲಿಂ ಸಂಘಟನೆಯ ಮುಖಂಡರು ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.