janadhvani

Kannada Online News Paper

ನೋಟು ರದ್ಧತಿಯ 2ನೇ ಆವೃತ್ತಿಯಾಗಿದೆ CAA ಮತ್ತು NRC- ರಾಹುಲ್ ಗಾಂಧಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (NRC) ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ಧಾಳಿ ನಡೆಸಿದರು. ಅಲ್ಲದೆ CAA ಮತ್ತು ಎನ್‌ಆರ್‌ಸಿ ಇವೆರಡೂ ನೋಟು ರದ್ಧತಿಯ 2.0 ಆವೃತ್ತಿಯಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನ 135 ನೇ ಪ್ರತಿಷ್ಠಾನ ದಿನದಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ನನ್ನ ಟ್ವೀಟ್ ಮತ್ತು ಬಂಧನದ ಕೇಂದ್ರದ ಚಿತ್ರಗಳನ್ನು ನೀವು ನೋಡಿದ್ದೀರಾ. ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ನೀವು ಕೇಳಿದ್ದೀರಾ? ಬಂಧನ ಕೇಂದ್ರದ ವೀಡಿಯೊವನ್ನು ನೀವು ನೋಡಿದ್ದೀರಾ? ‘ ಎಂದರು.

ಸರ್ಕಾರದ ಮೇಲಿನ ದಾಳಿಯನ್ನು ಮುಂದುವರೆಸಿದ ರಾಹುಲ್, “ಸಿಎಎ ಮತ್ತು ಎನ್‌ಆರ್‌ಸಿ ಮೂಲಕ, ಬಡವರನ್ನು ಸಾಲಿನಲ್ಲಿರಿಸಲು ಮತ್ತು ಅದರ 15 ಕೈಗಾರಿಕೋದ್ಯಮಿ ಸ್ನೇಹಿತರಿಗೆ ಸಹಾಯ ಮಾಡಲು ಸರ್ಕಾರ ಬಯಸಿದೆ” ಎಂದು ಹೇಳಿದರು.

ಸಿಎಎ ಮತ್ತು ಎನ್‌ಆರ್‌ಸಿಯನ್ನು ನಿಜವಾದ ಸಮಸ್ಯೆಗಳಿಂದ ವಿಚಲಿತಗೊಳಿಸುತ್ತಾ, “ಇದು ಜನರಿಗೆ ಮತ್ತೆ ತೊಂದರೆ ಉಂಟುಮಾಡಲಿವೆ. ಏಕೆಂದರೆ ಅವರು ಬಡವರಿಗೆ ತಮ್ಮ ದಾಖಲೆಗಳನ್ನು ತೋರಿಸಲು ಕೇಳುತ್ತಾರೆ, ಆದರೆ ಅವರು ಕೈಗಾರಿಕೋದ್ಯಮಿಗಳಿಂದ ದಾಖಲೆಗಳನ್ನು ಕೇಳುವುದಿಲ್ಲ” ಎಂದು ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

“CAA ಮತ್ತು NRC ನೋಟು ರದ್ಧತಿಯ 2.0 ಆವೃತ್ತಿ” ಎಂದು ತಿಳಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಈ ಹಿಂದೆ ಅಸ್ಸಾಂ ಬಂಧನ ಕೇಂದ್ರದ ವಿಡಿಯೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ನರೇಂದ್ರ ಮೋದಿಯವರು ಅಂತಹಾ ಕೇಂದ್ರಗಳ ಬಗ್ಗೆ ತಿಳಿದಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್ ಪಕ್ಷದ 135 ನೇ ಪ್ರತಿಷ್ಠಾಪನ ದಿನದಂದು ಕಾಂಗ್ರೆಸ್ ದೇಶಾದ್ಯಂತ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಸೇವ್ ದಿ ಕಾನ್ಸ್ಟಿಟ್ಯೂಷನ್ ಸೇವ್ ಇಂಡಿಯಾ ಮೆರವಣಿಗೆಯನ್ನು ಕೈಗೊಳ್ಳುತ್ತಿದೆ. ಅಸ್ಸಾಂನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com