janadhvani

Kannada Online News Paper

ಅತ್ಯಾಚಾರಿ ನಿತ್ಯಾನಂದ ಸ್ವಾಮಿಯ ಅಹಮದಾಬಾದ್​ ಆಶ್ರಮ ನೆಲಸಮ

ಅಹಮದಾಬಾದ್ ,ಡಿ.29: ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಅಹಮದಾಬಾದ್​ ಆಶ್ರಮವನ್ನು ಅಹಮದಾಬಾದ್​ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೆಲಸಮಗೊಳಿಸಲಾಗಿದೆ.

ಗುಜರಾತ್​ನ ಅಹಮದಾಬಾದ್​ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮಕ್ಕೆ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಲೀಸ್​ಗೆ ನೀಡಿದ್ದ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದರು. ಅಹಮದಾಬಾದ್​ ಹೊರವಲಯದಲ್ಲಿರುವ ಹೀರಾಪುರ ಗ್ರಾಮದಲ್ಲಿರುವ ಡಿಪಿಎಸ್​ ಶಾಲೆಯ ಬಳಿ ನಿತ್ಯಾನಂದ ಆಶ್ರಮಕ್ಕೆ ಅಕ್ರಮವಾಗಿ ಜಾಗ ನೀಡಿದ ಆರೋಪ ಕೇಳಿಬಂದಿತ್ತು.

ಹಲವು ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದ ಆಶ್ರಮಕ್ಕೆ ಜಾಗವನ್ನು ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ನಿತ್ಯಾನಂದ ದೇಶದಿಂದಲೇ ಪರಾರಿಯಾಗಿರುವ ವಿಷಯ ಖಚಿತವಾಗಿದ್ದು, ವಿದೇಶಾಂಗ ನೀತಿಯ ಪ್ರಕಾರ ಆತನ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ, ನಿತ್ಯಾನಂದನನ್ನು ವಶಕ್ಕೆ ಪಡೆಯಲು ಪೊಲೀಸರು ಆತ ಇರುವ ಜಾಗದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಏನಿದು ಘಟನೆ?: ನಿತ್ಯಾನಂದ ಸ್ವಾಮಿಗೆ ಸೇರಿದ್ದ ಅಹಮದಾಬಾದ್​ನ ಯೋಗಿನಿ ಸರ್ವಜ್ಞಪೀಠಂ ಆಶ್ರಮದ ಇಬ್ಬರು ಸಂಯೋಜಕರ ಮೇಲೆ ಮಕ್ಕಳನ್ನು ಅಪಹರಣ, ಹಲ್ಲೆ, ಹಿಂಸೆ ಮಾಡಿದ ಕೇಸುಗಳು ದಾಖಲಾಗಿದ್ದವು. ನಾಲ್ವರು ಮಕ್ಕಳು ತಮ್ಮನ್ನು ಆಶ್ರಮದಲ್ಲಿ ತಪ್ಪಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಆಶ್ರಮದ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ನಂತರ ಆ ನಾಲ್ವರು ಮಕ್ಕಳನ್ನು ರಕ್ಷಿಸಲಾಗಿತ್ತು. ಈ ವೇಳೆ ಡಿಪಿಎಸ್​ನಿಂದ ಲೀಸ್ ಪಡೆಯಲಾದ ಜಾಗದ ಬಗ್ಗೆ ಮಾಹಿತಿ ಹೊರಬಿದ್ದಿತ್ತು.

ಡಿಪಿಎಸ್​ಗೆ ಸೇರಿದ ಮಠದ ವಿವಾದಿತ ಜಾಗದಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಶನಿವಾರದಿಂದಲೇ ಕಟ್ಟಡ ತೆರವು ಕಾರ್ಯ ನಡೆಯುತ್ತಿದ್ದು, ಇಂದು ಕೂಡ ಮುಂದುವರೆದಿದೆ. ಡಿಪಿಎಸ್​ಗೆ ಸೇರಿದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಪಡೆದಿದ್ದ ನಿತ್ಯಾನಂದ ಆಶ್ರಮದ ಕಟ್ಟಡಗಳನ್ನು ಅಹಮದಾಬಾದ್​ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮುಂದಾಳತ್ವದಲ್ಲಿ ನೆಲಸಮಗೊಳಿಸಲಾಗಿದೆ.ಲೈಂಗಿಕ ದೌರ್ಜನ್ಯದ ಆರೋಪ:

ನಿತ್ಯಾನಂದ ಸ್ವಾಮಿ ದೇಶದಿಂದಲೇ ಪರಾರಿಯಾಗಿದ್ದಾನೆ ಎಂದು ಕಳೆದ ತಿಂಗಳು ಗುಜರಾತ್ ಪೊಲೀಸರು ಹೇಳಿದ್ದರು. ಬೆಂಗಳೂರಿನ ಜನಾರ್ದನ ಶರ್ಮ ಎಂಬ ಭಕ್ತರೊಬ್ಬರೊಬ್ಬರು ತಮ್ಮ ಮಗಳ ಮೇಲೆ ನಿತ್ಯಾನಂದ ಆಶ್ರಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಆಕೆಯನ್ನು ಭೇಟಿ ಮಾಡಲು ಕೂಡ ಅವಕಾಶ ನೀಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರಿನ ಆಶ್ರಮದಲ್ಲಿದ್ದ ಯುವತಿಯರನ್ನು ಅಹಮದಾಬಾದ್ ಆಶ್ರಮಕ್ಕೆ ಶಿಫ್ಟ್​ ಮಾಡಿದ್ದರಿಂದ ಅಹಮದಾಬಾದ್​ ಆಶ್ರಮದ ಎದುರು ಗಲಾಟೆ ಸಂತ್ರಸ್ತ ಯುವತಿಯ ಕುಟುಂಬಸ್ಥರು ಗಲಾಟೆ ಮಾಡಿದ್ದರು. ಅದರ ಆಧಾರದಲ್ಲಿ ಅಹಮದಾಬಾದ್​ ಪೊಲೀಸರು ಆಶ್ರಮದ ಆಡಳಿತ ಶಾಖೆಯ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದರು.

ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್​ಗೆ ಶಿಫ್ಟ್​ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್​ಗೆ ಸ್ಥಳಾಂತರವಾಗಿತ್ತು. ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ನಿತ್ಯಾನಂದ ಸ್ವಾಮಿ ಇತ್ತೀಚೆಗೆ ತಮ್ಮ ಪ್ರವಚನದ ಕೆಲವು ವಿಡಿಯೋ ತುಣುಕುಗಳನ್ನು ಕೂಡ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆ ಯಾವ ವಿಡಿಯೋಗಳೂ ಈಗ ರೆಕಾರ್ಡ್​ ಮಾಡಿರುವುದಲ್ಲ. ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಎಂದು ಅಹಮದಾಬಾದ್​ ಪೊಲೀಸರು ಹೇಳಿದ್ದರು.

2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್​ಪೋರ್ಟ್​ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್​ಪಿಯಾಗಿದ್ದ ರಮೇಶ್​ ಬಾನೋತ್​ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್​ ಸಮನ್ಸ್​ ನೀಡಿದ ನಂತರವೂ ಕೋರ್ಟ್​ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್​ಪೋರ್ಟ್​ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಅವರು ಗುಜರಾತ್​ಗೆ ಹೋಗಿದ್ದರು.

error: Content is protected !! Not allowed copy content from janadhvani.com