ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದು, ರೂಪೇ ಡೆಬಿಡ್ ಕಾರ್ಡ್ ಅಥವಾ ಯುಪಿಐ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವನ್ನು ಜನವರಿ ಒಂದರಿಂದ ರದ್ದುಪಡಿಸುವುದಾಗಿ ಪ್ರಕಟಿಸಿದ್ದಾರೆ.
ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಕ್ರಮವಾಗಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಜತೆಗೆ 50 ಕೋಟಿಗಿಂತ ಅಧಿಕ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳು, ಎರಡು ಡಿಜಿಟಲ್ ಪಾವತಿ ಆಯ್ಕೆಯನ್ನು ಒದಗಿಸುವುದು ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಎಲ್ಲ ಬ್ಯಾಂಕ್ಗಳು ಹಾಗೂ ಹಕ್ಕುದಾರರ ಜತೆ ವಿಸ್ತೃತ ಚರ್ಚೆ ನಡೆಸಿದ ಬಳಿಕ, ಬಜೆಟ್ನಲ್ಲಿ ಮಾಡಿದ ಘೋಷಣೆಯ ಬಗ್ಗೆ 2020ರ ಜನವರಿ ಒಂದರಂದು ಅಧಿಸೂಚನೆ ಹೊರಬೀಳುತ್ತಿದೆ ಎಂಬ ಸಂತಸದ ಸುದ್ದಿ ಪ್ರಕಟಿಸುತ್ತಿದ್ದೇನೆ. ಇದರ ಅನ್ವಯ ಈ ಅಧಿಸೂಚಿತ ಪಾವತಿ ವಿಧಾನಗಳ ಮೂಲಕ ಮಾಡುವ ಪಾವತಿಗೆ ಎಂಡಿಆರ್ ಶುಲ್ಕ ಇರುವುದಿಲ್ಲ” ಎಂದು ಬ್ಯಾಂಕ್ ಮುಖ್ಯಸ್ಥರ ಸಭೆಯ ಬಳಿಕ ತಿಳಿಸಿದರು.
ಇದಕ್ಕೂ ಮುನ್ನ ಆರ್ಬಿಐ ಹಲವು ಪಾವತಿ ಸಾಧನಗಳ ಮೂಲಕ ಮಾಡುವ ಪಾವತಿಗೆ ಎಂಡಿಆರ್ ಶುಲ್ಕ ರದ್ದುಪಡಿಸುವ ಆದೇಶ ಹೊರಡಿಸಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡಿಜಿಟಲ್ ಪಾವತಿ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮತ್ತು ನಗದು ರಹಿತ ಆರ್ಥಿಕತೆಯತ್ತ ಮುನ್ನಡೆಯುವ ನಿಟ್ಟಿನಲ್ಲಿ ರೂಪೇ ಡೆಬಿಟ್ ಕಾಡ್ ಮತ್ತು ಯುಪಿಐ ಪಾವತಿಯನ್ನು ಜನಪ್ರಿಯಗೊಳಿಸಲು ಬ್ಯಾಂಕ್ಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.






