janadhvani

Kannada Online News Paper

“ಭಾರತೀಯರನ್ನು ವಿಭಜಿಸದಿರಿ”: ದೆಹಲಿಯಲ್ಲಿ ಶಾಂತಿಯುತ ಬೃಹತ್ ಪ್ರತಿಭಟನೆ

ನವದೆಹಲಿ,ಡಿ. 27: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ಕಾಯ್ದೆ ಮತ್ತು ನಾಗರಿಕ ನೊಂದಣಿಯನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿದಿದೆ. ಇಂದು ಓಲ್ಡ್ ಡೆಲ್ಲಿಯ ಜಾಮಾ ಮಸೀದಿಯಲ್ಲಿ ಸಾವಿರಾರು ಜನರು ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ಜಮಾವಣೆಗೊಂಡರು. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿತ್ತು. “ಭಾರತೀಯರನ್ನು ವಿಭಜಿಸದಿರಿ”, “ನಮಗೆ ಸಮಾನತೆ ಬೇಕು” ಎಂಬ ಘೋಷಣೆಗಳು ಜಾಮಾ ಮಸೀದಿಯಲ್ಲಿ ಮೊಳಗಿದವು.

ಕಾಂಗ್ರೆಸ್ ಮುಖಂಡರಾದ ಅಲ್ಕಾ ಲಂಬಾ, ಶೋಯಬ್ ಇಕ್ಬಾಲ್ ಮೊದಲಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಳೆದ ವಾರ ನಡೆದ ಹಿಂಸಾಚಾರಗಳಿಗೂ ತಮ್ಮ ಹೋರಾಟಕ್ಕೂ ಸಂಬಂಧವಿಲ್ಲ. ಹಿಂಸಾಚಾರ ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ. ತಮ್ಮ ಶಾಂತಿಯುತ ಹೋರಾಟ ಮುಂದುವರಿಯುತ್ತದೆ ಎಂದು ನೇತಾರರು ತಿಳಿಸಿದರು.

“ಹಿಂಸಾಚಾರ ನಡೆಸುವವರು ನಮಗೆ ಸೇರಿದವರಲ್ಲ. ಈಗ ಒಂದು ಆಂದೋಲನ ಶುರುವಾಗಿದ್ದು, ಅದು ಮುಂದುವರಿಯುತ್ತದೆ. ನಮ್ಮ ಶಾಂತಿಯುತ ಹೋರಾಟಕ್ಕೆ ಧಕ್ಕೆ ತರುವವರು ನಮ್ಮವಾಗಿರುವುದಿಲ್ಲ. ನಾವು ಹಿಂಸಾಚಾರವನ್ನು ಸಹಿಸುವುದಿಲ್ಲ. ಕಳೆದ ಶುಕ್ರವಾರ ಸಂಭವಿಸಿದ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ” ಎಂದು ಮಾಜಿ ಶಾಸಕ ಶೋಯಬ್ ಇಕ್ಬಾಲ್ ಹೇಳಿದರು.

“ನಿರುದ್ಯೋಗವು ಈ ದೇಶದ ನಿಜವಾದ ಸಮಸ್ಯೆಯಾಗಿದೆ. ಆದರೆ, ನೋಟ್ ಬ್ಯಾನ್ ಸಂದರ್ಭದಲ್ಲಾದಂತೆ ಎನ್ಆರ್ಸಿಗಾಗಿ ಜನರು ಕ್ಯೂನಲ್ಲಿ ನಿಲ್ಲುವಂತೆ ಮಾಡಲು ನೀವು ಯತ್ನಿಸುತ್ತಿದ್ದೀರಿ” ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

“ದೇಶಕ್ಕಾಗಿ ಮತ್ತು ಸಂವಿಧಾನಕ್ಕಾಗಿ ಧ್ವನಿ ಎತ್ತುವುದು ಅತ್ಯಗತ್ಯವಾಗಿದೆ. ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯಿಂದ ತನ್ನ ಅಜೆಂಡಾವನ್ನು ಜನರ ಮೇಲೆ ಹೇರಬಾರದು” ಎಂದವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇತರ ವ್ಯಕ್ತಿಗಳು ಪೌರತ್ವ ಕಾಯ್ದೆಯನ್ನು ಹಿಂಪಡೆಯಬೇಕೆಂದು ಬಲವಾಗಿ ಆಗ್ರಹಪಡಿಸಿದರು.

“ನಮಗೆ ಈ ಕಾಯ್ದೆ ಬೇಕಿಲ್ಲ. ಸರ್ಕಾರ ಈ ಕಾಯ್ದೆ ಹಿಂಪಡೆಯಬೇಕು. ಈ ಕಾನೂನು ವಿರುದ್ಧ ಧ್ವನಿ ಎತ್ತುವುದನ್ನು ದೇಶದ ಜನರು ನಿಲ್ಲಿಸುವುದಿಲ್ಲ” ಎಂದು ಮೊಹಮ್ಮದ್ ಇಸ್ಮೈಲ್ ಎಂಬುವವರು ಹೇಳಿದರು.

“ಈ ದೇಶಕ್ಕೆ ಎನ್ಆರ್ಸಿಯಾಗಲೀ ಎನ್ಪಿಆರ್ ಆಗಲೀ ಅಗತ್ಯವಿಲ್ಲ. ನಮ್ಮ ಆರ್ಥಿಕತೆ ಉತ್ತಮಪಡಿಸುವತ್ತ ಸರ್ಕಾರ ಗಮನ ಹರಿಸಬೇಕು. ನಮಗೆ ಉದ್ಯೋಗ ಬೇಕಾಗಿದೆ. ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ಕಳೆದ ಶುಕ್ರವಾರ ನಡೆದ ಹಿಂಸಾಚಾರ ಖಂಡನೀಯ. ನಾವದನ್ನು ಬೆಂಬಲಿಸುವುದಿಲ್ಲ” ಎಂದು 36 ವರ್ಷದ ಮೊಹಮ್ಮದ್ ಶಕಿಬ್ ತಿಳಿಸಿದ್ಧಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ಶುಕ್ರವಾರದಂದು ಜಾಮಾ ಮಸೀದಿ ಸಮೀಪದ ದರ್ಯಾಗಂಜ್ನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಗಳು ಸಂಭವಿಸಿದ್ದವು. ಕೆಲ ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರೂ ಬಿಗಿಯಾದ ಕ್ರಮಗಳನ್ನು ಕೈಗೊಂಡು ಅನೇಕ ಮಂದಿಯನ್ನು ಬಂಧಿಸಿದ್ದರು. ಅವರಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೂಡ ಒಳಗೊಂಡಿದ್ದು, ಅವರಿನ್ನೂ ಪೊಲೀಸ್ ಕಸ್ಟಡಿಯಲ್ಲೇ ಇದ್ಧಾರೆ.

ಇವತ್ತು ನಡೆದ ಪ್ರತಿಭಟನೆಯಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿಲ್ಲ. ಉತ್ತರ ಪ್ರದೇಶ ಹೊರತುಪಡಿಸಿ ಈ ವಾರ ದೇಶದ ವಿವಿಧೆಡೆ ನಡೆದ ಪ್ರತಿಭಟನೆಯಲ್ಲೂ ಹೆಚ್ಚಿನ ಹಿಂಸಾಕೃತ್ಯಗಳು ಸಂಭವಿಸಿದ ವರದಿಯಾಗಿಲ್ಲ. ಬಹುತೇಕ ಎಲ್ಲಾ ಪ್ರತಿಭಟನೆಗಳು ಶಾಂತಿಯುತವಾಗಿಯೇ ನಡೆದಿವೆ. ಕಾಂಗ್ರೆಸ್, ಎಡಪಕ್ಷಗಳು ಈ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲ ನೀಡಿವೆ. ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ರಾರಾಜಿಸುತ್ತಿದ್ದುದು ವಿಶೇಷ.