✍ಕೆ.ಎಂ.ಸಿದ್ದೀಖ್
ಸನ್ಮಾನ್ಯ ಶ್ರೀ ಯಡಿಯೂರಪ್ಪನವರೇ,
ತಮಗೆ ಘನತೆ ಇದೆಯೋ, ಗೊತ್ತಿಲ್ಲ. ಆದರೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಒಂದು ಘನತೆ ಇದೆ. ಆ ಹುದ್ದೆಯಲ್ಲಿದ್ದುಕೊಂಡು ತಾವು ಹೀಗೆ ಮಾಡಬಾರದಿತ್ತು, ಛೆ! ನಿಮ್ಮ ಪೊಲೀಸರ ಕೈಯಲ್ಲಿ ಜೀವ ಕಳಕೊಂಡ ಇಬ್ಬರು ಬಡಪಾಯಿಗಳ ಕುಟುಂಬದವರು ತಮ್ಮಲ್ಲಿ ಹಣ ಬೇಡಿರಲಿಲ್ಲ.
ನಮಗೆ ಪರಿಹಾರ ಬೇಡ, ನ್ಯಾಯ ಬೇಕು ಅಂತ ಹೇಳಿದ್ದರು ಕೂಡಾ. ಆದರೂ ತಾವು ಮನೆಗೆ ಭೇಟಿ ನೀಡಿ ಪರಿಹಾರ ಘೋಷಿಸಿ ಬಂದವರು, ಈಗ ಪರಿಹಾರ ಕೊಡುತ್ತಿಲ್ಲ ಅನ್ನುತ್ತೀರಲ್ಲ. ಪರವಾಗಿಲ್ಲ, ಆದರೆ ಅದಕ್ಕೆ ನೀವು ನೀಡಿದ ಕಾರಣ ಇದೆಯಲ್ಲ, ಅದು ನಿಮ್ಮ ಪೋಲಿಸರ ಗುಂಡೇಟಿಗಿಂತ ಸ್ವಲ್ಪವೂ ಕಮ್ಮಿಯಿಲ್ಲದಷ್ಟು ಕ್ರೂರವಾಗಿತ್ತು.
ದುಃಖತಪ್ತ ಕುಟುಂಬದ ಮುಂದೆ ಅವರ ಮೃತ ಆಪ್ತರು ಅಪರಾಧಿಗಳು ಅಂತ ಹೇಳಿ ವಿರಹವೇದನೆಯ ನೋವಿಗೆ ಮತ್ತಷ್ಟು ಬರೆ ಎಳೆದಿರಲ್ಲ! ಹಾಗಾದರೆ ಅಪರಾಧಿಗಳ ಸಾವಿಗೆ ಸಾಂತ್ವನ ಹೇಳಲು ನೀವೇಕೆ ಹೋದಿರಿ? ಪರಿಹಾರವನ್ನೇಕೆ ಘೋಷಿಸಿದಿರಿ? ಆಪ್ತ ಜನರನ್ನು ಕಳಕೊಂಡ ದುಃಖ ಏನೆಂದು ನಿಮಗೆ ಗೊತ್ತಿಲ್ಲವೆ? ಪತ್ನಿ ವಿಯೋಗ ನಿಮಗೂ ಒಮ್ಮೆ ಅನುಭವವಾಗಿತ್ತು ಅಲ್ಲವೇ? ಅದನ್ನು ಆ ಮೃತ ಕುಟುಂಬದ ಮುಂದೆ ಒಮ್ಮೆ ನೆನಪಿಸಿಕೊಳ್ಳಬೇಕಿತ್ತು.
ನಿಮ್ಮ 10 ಲಕ್ಷ ನೀವೇ ಇಟ್ಟುಕೊಳ್ಳಿ. ಈ ನಾಡಿನ ಬರಿ ಮುಸಲ್ಮಾನರೇ ಒಂದೊಂದು ರೂಪಾಯಿ ಕೊಟ್ಟರೂ ಒಂದು ಕೋಟಿಯಾಗುತ್ತದೆ. ನೀವು ಆ ಹತ್ತು ಲಕ್ಷವನ್ನು ಬಡಪಾಯಿಗಳನ್ನು ಕೊಂದ ಪೊಲೀಸರಿಗೆ ಇನಾಮು ಕೊಡಿ. ಹಾಗೆ #ಕ್ರೌರ್ಯಪ್ರಶಸ್ತಿ ಅಂತ ಒಂದು ಪ್ರಶಸ್ತಿ ಸ್ಥಾಪಿಸಿ ಬಿಡಿ.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ಸರ್. ಕಾಲ ಹೀಗೆಯೇ ಇರುವುದಿಲ್ಲ. ಇವತ್ತು ಜಲೀಲ್ ಮತ್ತು ನೌಶೀನ್, ಅವರ ಅಪ್ಪ ಅಮ್ಮ, ಹೆಂಡತಿ ಮಕ್ಕಳು ಅನುಭವಿಸಿದ ನೋವಿದೆಯಲ್ಲ, ಅದು ಯಾರಿಗೂ ಬರಬಹುದು. ಕೊಂದವರು, ಆರೋಪ ಹೊರಿಸಿದವರು, ನೀವು, ನಿಮ್ಮನ್ನು ದಾರಿ ತಪ್ಪಿಸಿದವರು ಯಾರೂ ಇದರಿಂದ ಹೊರತಲ್ಲ. ನೋವುಂಡವರ ಶಾಪದ ಮುಂದೆ ಯಾವ ಪ್ರತಾಪವೂ ಉಳಿಯಲ್ಲ.
✍ಕೆ.ಎಂ.ಸಿದ್ದೀಖ್