ಬೆಂಗಳೂರು: ಮಂಗಳೂರು ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರಿಗೆ ಘೋಷಿಸಲಾಗಿದ್ದ ಪರಿಹಾರವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ತಡೆ ಹಿಡಿದ ವಿಚಾರ ಇದೀಗ ರಾಜಕೀಯವಾಗಿ ತಿಕ್ಕಾಟಕ್ಕೆ ಕಾರಣವಾಗಿದೆ.
ಸಿಎಂ ನಿರ್ಧಾರಕ್ಕೆ ಸ್ವತಃ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಅಲ್ಲದೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಸಚಿವ ಶ್ರೀರಾಮುಲು ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್‌ವೈ ಹಾಗೂ ಪಕ್ಷದ ನಿರ್ಧಾರಕ್ಕೆ ಭಿನ್ನವಾಗಿ ಹೇಳಿಕೆ ನೀಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಗಲಭೆ ನಡೆದು ಬಳಿಕ ಪೊಲೀಸ್ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.
ಈ ಘಟನೆ ವ್ಯಾಪಕವಾಗಿ ರಾಜ್ಯಾದ್ಯಂತ ಚರ್ಚೆಯಾದ ಹಿನ್ನೆಲೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಸಿಎಂ ಬಿಎಸ್‌ವೈ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಈ ನಡುವೆ ಘಟನೆಯ ವಿಡಿಯೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು ಪೊಲೀಸರ ಮೇಲೆ ಕಲ್ಲುತೂರಾಟ, ಸಿಸಿ ಕ್ಯಾಮರಾ ಧ್ವಂಸ ದೃಶ್ಯಗಳು ಸೆರೆಯಾಗಿವೆ.
ಬುಧವಾರ ಮಂಗಳೂರಿನಲ್ಲಿ ಅಧಿಕಾರಿಗಳು ಹಾಗೂ ಶಾಸಕರ ಜೊತೆ ಸಭೆ ನಡೆಸಿದ ಸಿಎಂ ಬಿಎಸ್‌ವೈ ನೀಡಲಾಗಿದ್ದ 10 ಲಕ್ಷ ರೂಪಾಯಿ ಪರಿಹಾರಕ್ಕೆ ತಡೆ ನೀಡಿದ್ದಾರೆ. ಗಲಭೆಯಲ್ಲಿ ಅಪರಾಧಿಗಳಾದರೆ ಅಂತವರಿಗೆ ಪರಿಹಾರ ನೀಡಿದರೆ ತಪ್ಪಾಗುತ್ತದೆ. ಈ ಕಾರಣಕ್ಕಾಗಿ ಒಂದು ರೂಪಾಯಿ ಪರಿಹಾರವನ್ನು ನೀಡುವುದಿಲ್ಲ ಎಂದಿದ್ದಾರೆ.
ಸಿಎಂ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ಮೃತ ಕುಟುಂಬಕ್ಕೆ ಸರಕಾರ ಪರಿಹಾರ ಕೊಡುವುದು ಬೇಡ. ಮೃತಪಟ್ಟವರ ಜೀವ ವಾಪಸ್ ಕೊಡಿ ಎಂದು ಹೇಳಿದ್ದಾರೆ.