janadhvani

Kannada Online News Paper

ಯಡಿಯೂರಪ್ಪ -ನಳಿನ್ ಕುಮಾರ್ ನಡುವಿನ ಶೀತಲ ಸಮರಕ್ಕೆ ಮಂಗಳೂರಿನ ಯುವಕರು ಬಲಿಯಾದರೇ?

ಮಂಗಳೂರು ನಗರದಲ್ಲಿ ಗುರುವಾರ ನಡೆದ ಗೋಲಿಬಾರ್ ಎರಡು ಭಾರತಾಂಬೆಯ ಮಕ್ಕಳನ್ನು ಬಲಿಪಡೆದದ್ದು ಎಲ್ಲರಿಗೂ ತಿಳಿದದ್ದೇ, 200ರಷ್ಟೂ ಇಲ್ಲದ ಪ್ರತಿಭಟನಾಕಾರರನ್ನು 7000ಅಂತ ಸುಳ್ಳು ಹೇಳಿ ಮಾಡಿದ ಗೋಲಿಬಾರ್ ದಿನಕಳೆದಂತೆ ಬೇರೆ ಬೇರೆ ಆಯಾಮ ಪಡಕೊಳ್ಳುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ಇರುವ ಶೀತಲ ಸಮರ ರಾಜ್ಯದ ಜನತೆಗೆ ಮೊದಲೇ ಗೊತ್ತಿರುವ ವಿಷಯವಾಗಿದೆ.

ಲಾಠಿಚಾರ್ಜು ಮಾಡಬೇಡಿ ಎಂದು ಹೇಳಿಕೆ ಕೊಟ್ಟ ಮಾನ್ಯ ಮುಖ್ಯಮಂತ್ರಿಯನ್ನು, ಗೋಲಿಬಾರ್ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡುವ ಮೂಲಕ ಯಡಿಯೂರಪ್ಪನವರ ವಿರುದ್ಧ ವಿರೋಧಿಗಳು ನಡೆಸಿದ ಪಿತೂರಿಯಂತೆ ಈ ಗೋಲಿಬಾರ್ ಭಾಸವಾಗುತ್ತಿದೆ.

ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿ ಜನಮನ್ನಣೆ ಗಳಿಸುತ್ತಿರುವುದನ್ನು ಕಂಡು ಈ ಕೃತ್ಯ ನಡೆಸಿರಬಹುದು. ಅದಕ್ಕೆ ಪುರಾವೆಯಾಗಿ, ಮಂಗಳೂರಿಗೆ ಭೇಟಿಕೊಟ್ಟ ಸಿಎಂ ಯಡಿಯೂರಪ್ಪನವರ ಪೊಲೀಸರೊಂದಿಗಿನ ಆಕ್ರೋಶ ಮತ್ತು ಮಾಧ್ಯಮಗಳಿಗೆ ನೀಡಿದ ಹೇಳಿಕೆಯೇ ಧಾರಾಳ. ‘ಸರಕಾರ ಗೋಲಿಬಾರ್ ನಡೆಸಲು ಅನುಮತಿ ನೀಡಿಲ್ಲ’ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದು, ಅನುಮತಿ ಅಥವಾ ನಿರ್ದೇಶನ ಕೊಟ್ಟದ್ದು ಬಿಜೆಪಿ ಅಥವಾ ಸಂಘ ಪರಿವಾರ ಅನ್ನುವುದಕ್ಕೆ ಸಮವಲ್ಲವೇ?

ಪೊಲೀಸರ ಮಾತುಕತೆ ವಿಡಿಯೋದಲ್ಲೂ ಇದು ಮರುಕಳಿಸುತ್ತಿದೆ. ‘ಇಷ್ಟು ಗುಂಡು ಹಾರಿಸಿಯೂ ಒಂದು ಹೆಣಾನೂ ಬೀಳಲಿಲ್ಲ’, ಸಾಲದ್ದಕ್ಕೆ, ‘ಒಂದೆರಡು ಜೀವ ಹೋಗಲಿ’ ಎಂದೆಲ್ಲಾ ಮಾತಾನಾಡುತ್ತಿರುವ ಪೊಲೀಸರ ಮಾತುಕತೆಗಳು ಪುರಾವೆಯಾಗಲು ಸಾಕಲ್ಲವೇ?

ಹೀಗಿರುವಾಗ, ಎರಡು ಅಮಾಯಕ ಭಾರತೀಯರ ಜೀವ ಪಡೆದು, ಶಾಂತಿಯಿಂದ ಜೀವಿಸುತ್ತಿದ್ದ ದಕ್ಷಿಣ ಕನ್ನಡಕ್ಕೆ ಬೆಂಕಿ ಇಡುವ ಕೆಲಸವನ್ನು ಮಾನ್ಯ ಸಂಸದರು ಮಾಡಿದ್ದಾರೆ! ಆ ಮೂಲಕ ತನ್ನ ಬೆಂಕಿ ಇಡುವ ಹೇಳಿಕೆಯನ್ನು ನಡೆಸಿಕೊಟ್ಟಿದ್ದಾರೆ, ಮಾತ್ರವಲ್ಲ ಯಡಿಯೂರಪ್ಪನವರು ಉಪಚುನಾವಣೆ ಗೆದ್ದು ಕುರ್ಚಿ ಗಟ್ಟಿ ಗೊಳಿಸಿದ ಬಳಿಕ ಹೈಕಮಾಂಡ್ ಬಳಿ ಯಡಿಯೂರಪ್ಪರವರಿಗೆ ಸಿಕ್ಕಿದ ಗೌರವವೂ ಸಂಸದರನ್ನು ರೊಚ್ಚಿಗೆಬ್ಬಿಸಿರಬಹುದು.

ಇನ್ನೂ, ಅಮಾಯಕರ ಕುಟುಂಬಕ್ಕೆ ತಲಾ 10ಲಕ್ಷ ಪರಿಹಾರ ನೀಡಿರುವುದೂ ಪೊಲೀಸರ ವೈಫಲ್ಯದ ಹೊಣೆ ಸರಕಾರ ಹೊತ್ತು ಕೊಂಡಂತೆ ಅಲ್ಲವೇ?

ಈ ಎಲ್ಲಾ ವಿದ್ಯಮಾನಗಳಿಂದ ಪೊಲೀಸರಿಗೆ ಮತ್ತು ಜಿಲ್ಲೆಯ ಸಂಘ ಪರಿವಾರಕ್ಕೆ ಮುಜುಗರವಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಬಿಜೆಪಿಯ ಹುನ್ನಾರ ತಲೆಕೆಳಗಾಗಿದೆ. ಬೆಂಗಳೂರಿನಲ್ಲಿ ಇಂದು ನಡೆದ ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯೇ ಸಾಕ್ಷಿ. ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಜನಸಾಗರ ನೋಡಿ ಮಂಗಳೂರಿನ ಪೊಲೀಸರು ಮತ್ತು ಬೆಂಕಿ ಸಂಸದರು ನಿಬ್ಬೆರಗಾಗಿದ್ದಾರೆ.

ಸಂವಿಧಾನ ತಿದ್ದುಪಡಿ ನೈಜ ಭಾರತೀಯರ ಉಸಿರು ಇರುವ ತನಕ ನಡೆಯುವುದಿಲ್ಲ ಅನ್ನುವುದು ಅಮಿತ ಶಾ ರಿಗೆ ಗೊತ್ತಾಗಿದೆ.

ಕರಾವಳಿಗರನ್ನು ಬೆಚ್ಚಿ ಬೀಳಿಸಿದ್ದ ಗುಂಡಿನ ಶಬ್ದದ ಹಿಂದಿರುವ ಸಂಸದರ ಗೂಡತಂತ್ರ ಬಟಾ ಬಯಾಲಾಗಿದೆ. ಯಡಿಯೂರಪ್ಪ ದ.ಕ. ಜಿಲ್ಲೆಯ ನೈಜ ಭಾರತೀಯರ ಮನ ಗೆದ್ದಿದ್ದಾರೆ. ಆ ಮೂಲಕ ತನ್ನ ಅವಧಿ ಬಳಿಕದ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.

ಮಾನ್ಯ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಗೋಲಿಬಾರ್‌ನಲ್ಲಿ ನೈಜ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಂಡರೆ, ತಮ್ಮ ಇಷ್ಟು ವರ್ಷಗಳ ರಾಜಕೀಯ ಜೀವನ ಸಾರ್ಥಕ.

error: Content is protected !! Not allowed copy content from janadhvani.com