janadhvani

Kannada Online News Paper

ಪೌರತ್ವ ಕಾಯ್ದೆ ಆತಂಕ: ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ ಸಿಎಂ ಭೇಟಿ

ಬೆಂಗಳೂರು,ಡಿ.19: ಕೇಂದ್ರ ಸರಕಾರವು ಜಾರಿಗೊಳಿಸಿರುವ ವಿವಾದಿತ ಕಾಯ್ದೆ ಸಿಎಎ ಹಾಗೂ ಪ್ರಸ್ತಾವಿತ ಎನ್ಆರ್‌ಸಿ ಯ ಕುರಿತು ಮುಸ್ಲಿಮ್ ಸಮುದಾಯಕ್ಕಿರುವ ಆತಂಕವನ್ನು ನೀಗಿಸಬೇಕೆಂದು ಇಂದು ಸಂಜೆ ಕರ್ನಾಟಕ ಮುಸ್ಲಿಮ್ ಜಮಾತ್ ನಿಯೋಗವು ರಾಜ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮುಸ್ಲಿಮರ ಆತಂಕವನ್ನು ಕೇಂದ್ರಕ್ಕೆ ಮನದಟ್ಟು ಮಾಡುವೆನೆಂದೂ, ರಾಜ್ಯದ ಮುಸ್ಲಿಮರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವೆನೆಂದೂ ಭರವಸೆ ನೀಡಿದರಲ್ಲದೇ, ಪ್ರತಿಭಟನೆಗಳಿಂದ ಹಿಂದೆ ಸರಿಯಬೇಕೆಂದೂ ಕೋರಿಕೊಂಡರು.

ಮಂಗಳೂರಿನಲ್ಲಿ ಪೋಲಿಸರು ಗೋಲಿಬಾರ್ ಮಾಡಿರುವುದರ ಬಗ್ಗೆ ನಿಯೋಗವು ಗಮನ ಸೆಳೆದಾಗ, ಘಟನೆಗೆ ವಿಷಾದ ವ್ಯಕ್ತಪಡಿಸಿದರಲ್ಲದೇ ಸೂಕ್ತ ಕ್ರಮ ಜರಗಿಸುವುದಾಗಿ ಭರವಸೆಯಿತ್ತರು.

ನಿಯೋಗದಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಅಸಯ್ಯಿದ್ ಫಝಲ್ ಕೋಯಮ್ಮ ಅಲ್‌ಬುಖಾರಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿ-ಎ- ಕರ್ನಾಟಕ ಅನ್ವರಲಿ ಸಾಹೆಬ್ ರಾಮನಗರ, ರಾಜ್ಯ ಪ್ರ.ಕಾರ್ದರ್ಶಿ ಎನ್.ಕೆ.ಎಂ.ಶಾಫಿ ‌ಸ‌ಅದಿ, ಎಸ್ಸೆಸ್ಸೆಫ್ ರಾಜ್ಯಾದ್ಯಕ್ಷ ಸಯ್ಯದ್ ಉಮರ್ ಅಸ್ಸಖಾಫ್ ಅಲ್ ಮದನಿ, ಎಸ್ಸೆಸ್ಸೆಫ್ ನಿಕಟಪೂರ್ವ ಅಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಂಡಂಗೇರಿ, ಮುಸ್ಲಿಂ‌ ಜಮಾಅತ್ ರಾಜ್ಯ ಮುಖಂಡರಾದ ಹಮೀದ್ ಮಡಿಕೇರಿ, ಯಾ‌ಅ್‌ಕೂಬ್ ಯೂಸುಫ್ ಶಿವಮೊಗ್ಗ, ಹಾಫಿಝ್ ಝುಲ್ಫಿಕರ್ ಬೆಂಗಳೂರು,ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ನವಾಝ್ ಭಟ್ಕಳ,ಇಸ್ಮಾಯಿಲ್ ಸಅದಿ ಕಿನ್ಯ ಮುಂತಾದವರು ಉಪಸ್ಥಿತರಿದ್ದರು.