janadhvani

Kannada Online News Paper

ಮಂಗಳೂರು: ಸಿಎಂ ಆದೇಶವನ್ನು ಮೀರಿ ಪೊಲೀಸರಿಂದ ಲಾಠಿ ಪ್ರಹಾರ

ಮಂಗಳೂರು: ನಿಷೇಧಾಜ್ಞೆ ಮಧ್ಯೆ ಪೌರತ್ವ‌ ತಿದ್ದುಪಡಿ‌ ಕಾಯ್ದೆ ವಿರೋಧಿಸಿ‌ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕೆಲ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿಯಿಂದ ಜಿಲ್ಲಾಧಿಕಾರಿ‌ ಕಚೇರಿವರೆಗೆ ಪ್ರತಿಭಟನೆ ನಡೆಸಲು ಕೆಲವರು ಯತ್ನಿಸಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಪ್ರಹಾರ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಅನುಮತಿ ಇಲ್ಲದೇ‌ ಪ್ರತಿಭಟನೆ ನಡೆಸುವಂತಿಲ್ಲ ಎಂದು ಈಗಾಗಲೇ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದು, ಏಕಾಏಕಿ ಪ್ರತಿಭಟನೆಗೆ ಯತ್ನಿಸಿದ್ದರಿಂದ ‌ಈ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅದೆಷ್ಟೂ ಕೂಗ್ತಾರೋ ಕೂಗಲಿ ಬಿಡಿ…

ಬೆಂಗಳೂರು: ಪ್ರತಿಭಟನಾನಿರತರನ್ನು ಚದುರಿಸುವ ವಿಚಾರದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್ ತನ್ವೀರ್ ಅಹ್ಮದ್‌ ಹೀಗೆ ಹೇಳಿದರು. ‘ಗಂಟಲು ಕಟ್ಟುವವರೆಗೆ ಘೋಷಣೆಗಳನ್ನು ಕೂಗಿಕೊಳ್ಳಲಿ ಬಿಡಿ. ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಮನವೊಲಿಸಲು ಪ್ರಯತ್ನಪಟ್ಟಷ್ಟೂ ಅವರ ಉದ್ಧಟತನ ಹೆಚ್ಚಾಗುತ್ತಿದೆ’ ಎಂದರು.

ಮೈಸೂರು: ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾಕಾರರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ಕಮಿಷನರ್ ಕೆ.ಟಿ.ಬಾಲಕೃಷ್ಣ ಅವರಿಗೆ ಡಿ.24 ರಂದು ಪ್ರತಿಭಟನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು. ಮನವಿ ಪರಿಶೀಲಿಸಿ ನಂತರ‌ ಅನುಮತಿ ನೀಡುವುದಾಗಿ ಕಮಿಷನರ್ ಭರವಸೆ ನೀಡಿದರು.

ಎಸ್.ಆರ್.ಹಿರೇಮಠ ಮಾತನಾಡಿ, ಮೊದಲು ಪ್ರತಿಭಟನೆಗೆ ಅನುಮತಿ ನೀಡಿ ನಂತರ ವಾಪಸ್ ತೆಗೆದುಕೊಂಡಿದ್ದು ಸರಿಯಲ್ಲ ಎಂದು ಖಂಡಿಸಿದರು.ಹೋರಾಟಗಾರರಾದ ಎಸ್.ಆರ್.ಹಿರೇಮಠ, ಚಂದ್ರಶೇಖರ ಮೇಟಿ, ಬಡಗಲಪುರ ನಾಗೇಂದ್ರ ಇತರರು ಇದ್ದರು.


ತುಮಕೂರಿನಲ್ಲಿ ಪ್ರತಿಭಟನೆಗೆ ಯತ್ನ: ಗುಂಪು ಚದುರಿಸಿದ ಪೊಲೀಸರು

ತುಮಕೂರು: ಪೌರತ್ವ(ತಿದ್ದುಪಡಿ) ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯ ಹಾಗೂ ಪ್ರಗತಿಪರ ಸಂಘಟಗಳು ತುಮಕೂರಿನಲ್ಲಿ ನಿಷೇದಾಜ್ಞೆ ನಡುವೆಯೂ ಪ್ರತಿಭಟನೆಗೆ ಯತ್ನಿಸಿದ್ದು, ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೇ ಗುಂಪನ್ನು ಚದುರಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಕಲಬುರ್ಗಿಯಲ್ಲಿ ಪ್ರತಿಭಟನೆ

ಕಲಬುರ್ಗಿ: ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಪೀಪಲ್ಸ್ ಫೋರಂ ನೇತೃತ್ವದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ‌ಕರೆ ನೀಡಿದ್ದ ಬಂದ್ ಮತ್ತು ಪ್ರತಿಭಟನೆ ಅಂಗವಾಗಿ ನಗರದ ಜಗತ್ ವೃತ್ತದಲ್ಲಿ ಭಾರಿ ಜನಸ್ತೋಮ ಸೇರಿತ್ತು. ಪ್ರತಿಭಟನಾನಿರತರು ವೃತ್ತದಲ್ಲಿಯೇ ನಮಾಜ್ ಮಾಡಿದರು.

ಮತ್ತೊಂದೆಡೆ ನಗರದ ಸರ್ದಾರ್ ವಲ್ಲಭಭಾಯಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ‌ನಡೆಸಲು‌ ಮುಂದಾದ ಸಿಪಿಐ, ಸಿಪಿಐ (ಎಂ) ಹಾಗೂ ಎಸ್‌ಯುಸಿಐ (ಸಿ) ಪಕ್ಷದ ಮುಖಂಡರನ್ನು ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ವಶಕ್ಕೆ ‌ಪಡೆದರು.