ನಾಯಕರು ಕರೆ ಕೊಟ್ಟಾಗಿದೆ, ನಾವೂ ಬೀದಿಗಿಳಿಯುತ್ತಿದ್ದೇವೆ…
✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
ಆರ್ಥಿಕತೆ ಪಾತಾಳಕ್ಕಿಳಿದಿದೆ, ನೈತಿಕತೆ ಬೀದಿ ಬೀದಿಗಳಲ್ಲಿ ಹರಾಜಾಗುತ್ತಿದೆ, ರೈತರು ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದಾರೆ, ಪದವೀಧರರು ಕಸುಬಿಲ್ಲದೆ ಅಂಡಲೆಯುತ್ತಿದ್ದಾರೆ, ಕಂಪೆನಿಗಳಿಗೆ ಬೀಗ ಜಡಿಯಲಾಗುತ್ತಿದೆ, ತುತ್ತು ಅನ್ನಕ್ಕೂ ಪರಕಾಟ ಪರದಾಟ ಕಿತ್ತಾಟ ನಡೆಸುವ ಸನ್ನಿವೇಶ ಬರುತ್ತಿದೆ, ಆದರೆ ಇದೆಲ್ಲವನ್ನೂ ಸಹಿಸಿಕೊಂಡು ನಿಂತೆವು ನಾವು.
ಆದರೆ ಈಗ ಈ ಸುಂದರ ದೇಶದ ಬುಡಕ್ಕೇ ಕೊಡಲಿ ಹಾಕಲು ನಿಂತಿದ್ದಾರೆ ದೇಶದ ಅತಿರಥ ಮಹಾರಥರು! ರಾಷ್ಟ್ರದ ಪ್ರಾಣವಾಯುವಾದ ಜಾತ್ಯತೀತ ಪರಂಪರೆಯನ್ನೇ ನಾಶ ಮಾಡಲು ಹೊರಟು ನಿಂತು ಬಿಟ್ಟಿದ್ದಾರೆ!!
ನಾವಿಷ್ಟರವರೆಗೆ ಎದೆತಟ್ಟಿ ಹೆಮ್ಮೆಯಿಂದ ಯಾವ ಸಂವಿಧಾನದ ಬಗ್ಗೆ ಹೇಳಿ ಬೀಗುತ್ತಿದ್ದೆವೋ ಆ ಸಂವಿಧಾನವೇ ಇವತ್ತು ಅಪಾಯದಲ್ಲಿದೆ!!
ಸಂವಿಧಾನ ವಿರೋಧಿ CAB ರಾಜ್ಯಸಭೆಯಲ್ಲೂ ಅಂಗೀಕಾರ ವಾಗಿದೆ. ರಾಷ್ಟ್ರಪತಿಗಳ ಅಂಕಿತವೂ ಬಿದ್ದು ಮಸೂದೆಯು ಕಾಯ್ದೆಯಾಗಿ ಆಗಿದೆ. ಈಗ ಅದು CAB ಅಲ್ಲ. CAA. ಇನ್ನು ಕಾರ್ಯಾಂಗ ಕಾರ್ಯರೂಪಕ್ಕೆ ತರುತ್ತದೆ.
ಅದರ ಮೂಲಕ ಹೊರಗಿನಿಂದ ಬಂದ ಮುಸ್ಲಿಮರನ್ನು ಹೊರಗಟ್ಟಲು ಅಥವಾ ಬಂಧೀಖಾನೆಯಲ್ಲಿ ಇಡಲು ತಯಾರಿ ನಡೆಸುತ್ತಿದ್ದಾರೆ.
ಇನ್ನು NRC ಮೂಲಕ ಎಲ್ಲರೂ ನಮ್ಮ ಮುತ್ತಾತರ ಕಾಲದ (1974 ಮಾರ್ಚ್ 24ರ ) ದಾಖಲೆಗಳನ್ನು ನೀಡಬೇಕಾಗಿದೆ. ಅದನ್ನು ನೀಡಲು ವಿಫಲವಾದ ಮುಸ್ಲಿಮೇತರನ್ನು CAA ಮೂಲಕ ಭಾರತೀಯ ಪೌರತ್ವ ನೀಡಲಾಗುತ್ತದೆ.ಆದರೆ ಮುಸ್ಲಿಮರನ್ನು ಮಾತ್ರ ಒಂದೋ ಹೊರಗಟ್ಟುವುದು ಅಥವಾ ಜೈಲಿಗಟ್ಟುವುದು!! ದೇಶದ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಿರುವ ಈ ತಿದ್ದುಪಡಿ ಕಾಯ್ದೆಯು ಸ್ಪಷ್ಟವಾದ ಸಂವಿಧಾನದ ಉಲ್ಲಂಘನೆಯಾಗಿದ್ದು ಈ ದೇಶದ ಜಾತ್ಯತೀತ ಪರಂಪರೆಯ ಮೇಲೆ ಮಾಡಿದ ದಾಳಿಯಾಗಿದೆ. ಆದ್ದರಿಂದಲೇ ನಾವು ಈ ಬಿಲ್ಲನ್ನು ಸ್ಪಷ್ಟವಾಗಿ ವಿರೋಧಿಸಬೇಕಾಗಿದೆ. ಇಲ್ಲಿ ಮುಸ್ಲಿಮರಿಗೊಂದು ಹಿಂದೂಗಳಿಗೊಂದು ನಿಯಮವಿಲ್ಲ. ಇದು ಭಾರತ! ಇಲ್ಲಿ ಎಲ್ಲರೂ ಒಂದೇ. ಒಂದೇ ನಿಯಮ ಒಂದೇ ಕಾನೂನು! ಕಾರಣ ಈ ದೇಶದ ಸ್ವಾತಂತ್ರ್ಯ ಸಮರದಲ್ಲಿ ಹಲವು ಪೂರ್ವಿಕ ಮುಸ್ಲಿಂ ನೆತ್ತರ ಹನಿಗಳಿವೆ, ಇಲ್ಲಿನ ಪವಿತ್ರ ಮಣ್ಣಿನಲ್ಲಿ ನಮ್ಮ ಹಲವು ಪೂರ್ವಿಕರ ರಕ್ತ ಕಣಗಳು ಮಿಶ್ರಿತವಾಗಿದೆ!! ಈ ದೇಶ ಯಾವತ್ತೂ ಅಭಿಮಾನ ಪಡುವ ತಾಜ್‌ಮಹಲ್, ಕೆಂಪುಕೋಟೆ, ಕುತುಬ್‌ಮಿನಾರ್‌ಗಳು ನಮ್ಮವರ ಕೊಡುಗೆಗಳಾಗಿವೆ!! ಈ ಮಣ್ಣಿನಲ್ಲಿ ಉಳಿದವರಿಗೆಷ್ಟು ಹಕ್ಕಿದೆಯೋ ಒಂದಲ್ಪವೂ ಕಡಿಮೆಯಾಗದೆ ಅಷ್ಟೇ ಹಕ್ಕು ನಮಗೂ ಇದೆ! ಆದ್ದರಿಂದಲೇ ಈ ಬಹುತ್ವದ ಉಳಿವಿಗಾಗಿ ನಾವು ಹೋರಾಡಬೇಕಿದೆ.
ನಿಜಕ್ಕೂ ಇಲ್ಲಿ ಅಲ್ಲಾಹನ ಮೇಲೆ ಸಂಪೂರ್ಣ ವಿಶ್ವಾಸವುಳ್ಳ ಸತ್ಯವಿಶ್ವಾಸಿಗೆ ಹೆದರಿಕೆ ಇಲ್ಲ. ಈ ನಿಯಮಗಳನ್ನು ತರುತ್ತಿವವರೂ ಅದಕ್ಕಾಗಿ ಸಹಕರಿಸುವವರೂ ಎಲ್ಲರೂ ಅಲ್ಲಾಹನ ನಿಯಂತ್ರಣದಲ್ಲೇ ಇದ್ದಾರೆ ಎಂಬ ನೂರು ಶೇಕಡಾ ವಿಶ್ವಾಸ ನಮಗಿದೆ. ಅವನಿಚ್ಚಿಸಿದ್ದಲ್ಲದೆ ಇಲ್ಲಿ ನಡೆಯೋಲ್ಲ. ಅವನಿಚ್ಚಿಸಿದ್ದು ಇಲ್ಲಿ ನಡೆದೇ ನಡೆಯುತ್ತದೆ. ಆದ್ದರಿಂದಲೇ ಧೃಡವಾದ ವಿಶ್ವಾಸ ಉಳ್ಳವನಿಗೆ ಇಲ್ಲಿ ಅಂಜಬೇಕಿಲ್ಲ ಅಳುಕಬೇಕೆಂದಿಲ್ಲ. ಈ ಪ್ರತಿಭಟನೆಗಳು ಏನಿದ್ದರೂ ನಮ್ಮ ಸಂವಿಧಾನದ ಸಂರಕ್ಷಣೆಗಾಗಿ! ನಮ್ಮ ಪೂರ್ವಿಕರು ಜೀವ ಕೊಟ್ಟು ಕಟ್ಟಿಬೆಳೆಸಿದ ಸ್ವಾತಂತ್ರದ ಸಂರಕ್ಷಣೆಗಾಗಿ! ನಾವೆಂದೂ ಎದೆತಟ್ಟಿ ಹೇಳುವ ಜಾತ್ಯಾತೀತತೆಯ ಉಳಿವಿಗಾಗಿ…
ಇವತ್ತು ಆಳುವವರಿಗೆ ಟೆನ್ಶನೇ ಇಲ್ಲ ಬಿಡಿ. ಒಂದು ತ್ರಿವಳಿ ತ್ವಲಾಖ್ ಬಗ್ಗೆ ಕಾಯಿದೆ ತಂದ್ರೆ ಜನ ಅದರ ಬಗ್ಗೆ ಚರ್ಚೆ ಮಾಡುವ ಗೌಜಿಯಲ್ಲಿ ಇಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಮರೆತು ಬಿಟ್ಟರು, ಬಾಬರೀ ತೀರ್ಪಿನ ಬಿಸಿಯಲ್ಲಿ ಆರ್ಥಿಕ ಅಧಃಪತನದ ಆಳ ಅರಿಯದೇ ಹೋದೆವು, ಇದೀಗ ಬೀದಿ ಬೀದಿಗಳಲ್ಲಿ ನಮ್ಮ ಹೆಂಗೆಳೆಯರ ಮಾನ ಹರಾಜಾಗುತ್ತಿದೆ, ಹಲವು ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ಸುಟ್ಟು ಬೂದಿ ಮಾಡುತ್ತಿದ್ದಾರೆ NRC, CAA ತಂದು ಅದೆಲ್ಲವನ್ನೂ ಮರೆತೇ ಹೋಗುವಂತೆ ಮಾಡಿ ಬಿಟ್ಟರು ಈ ನಮ್ಮ ಮಹಾ ನಾ(ಲಾ)ಯಕರು!! ಅವರಿಗೊತ್ತು ಇಲ್ಲಿನ ಪ್ರಜೆಗಳ ಮನಃಶಾಸ್ತ್ರ, ಒಂದು ಇಶ್ಯೂ ತಂದ್ರೆ ಬಾಕಿ ಎಲ್ಲವನ್ನೂ ಬಿಟ್ಟು ಅವರು ಅದರ ಹಿಂದೆ ಕುಳಿತು ಬಿಡ್ತಾರೆ. ಅತೀ ಕೆಟ್ಟ ಆಡಳಿತ ಕೊಟ್ರೂ ಪರ್ವಾಗಿಲ್ಲ ಒಂದು ಪುಲ್ವಾಮಾ ಮೂಲಕ ಇಡೀ ರಾಷ್ಟ್ರವನ್ನೇ ತಮ್ಮತ್ತ ಸೆಳೆಯಬಹುದೆಂದು!!
ನೀವೇ ನೋಡಿಯಂತೆ ಅಭಿವೃದ್ಧಿಯ ಮಾತೇ ಇಲ್ಲ ಈಗ. ಅದೇನಿದ್ದರೂ ಧರ್ಮ-ಜಾತಿ ಮಂದಿರ-ಮಸೀದಿ ನಿರಾಶ್ರಿತರು… ಇದೇ ಆಯ್ತು! ನಿರಾಶ್ರಿತರನ್ನು ಹೊರಗಟ್ಟುವ ಬ್ಯುಸಿಯಲ್ಲಿ ಅಶ್ರಿತರ ಅವಸ್ಥೆಯಂತೂ ಇಲ್ಲಿ ಕೇಳುವವರೇ ಇಲ್ಲದಂತಾಗಿದೆ!! ಹೀಗೆ ಮುಂದುವರಿದರೆ ತುತ್ತು ಅನ್ನಕ್ಕೂ ಪರದಾಡುವಂತಹ ಅವಸ್ಥೆ ಮುಂದೆ ಬರಲಿದೆ. ಅದರೊಟ್ಟಿಗೆ ನೋಟ್ ಬ್ಯಾನ್ ವೇಳೆ ಕಪ್ಪು ಹಣ ಬರಬಹುದೆಂಬ ಭ್ರಮೆಯಲ್ಲಿ ಬ್ಯಾಂಕುಗಳ ಮುಂದೆ ಕ್ಯೂ ನಿಂತ ನಮ್ಮನ್ನು NRC CAA ಹೆಸರಲ್ಲಿ ಅಲೆಯುವಂತೆ ಮಾಡುತ್ತಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಐಶಾರಾಮಿ ಬಂಗಲೆಗಳಲ್ಲಿ ಮೆತ್ತನೆಯ ಮಂಚದಲ್ಲಿ ಆಡಂಬರದಿಂದ ಜೀವಿಸುತ್ತಿರುವ ಈ ಆಳುವವರಿಗೇನು ಗೊತ್ತು ಈ ನಾಡಿನ ಸಾಮಾನ್ಯರ ಬವನೆ?
ಆದ್ದರಿಂದಲೇ ಪ್ರತಿರೋಧ ಒಂದೇ ಉಳಿದಿರುವ ಮಾರ್ಗ.ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಬೀದಿಗಿಳಿಯ ಬೇಕಾದ ದಿನಗಳಾಗಿವೆ ಮುಂದಿರುವುದು.ಪ್ರತಿ ನಗರ ಪಟ್ಟಣಗಳಲ್ಲಿ ಹಳ್ಳಿ ಗಲ್ಲಿಗಳಲ್ಲಿ ಬೀದಿ ಬೀದಿಗಳಲ್ಲಿ ಪ್ರತಿರೋಧದ ಜ್ವಾಲೆಗಳು ಏಳಬೇಕಾಗಿದೆ. ಅಸ್ಸಾಂ ಸಹಿತ ಹಲವು ಈಶಾನ್ಯ ರಾಜ್ಯಗಳಲ್ಲಿ ಕರ್ಫ್ಯೂ ಮಧ್ಯೆಯೇ ಜನರು ಬೀದಿಗಿಳಿದು ಜೀವಹಾನಿಯೂ ಸಂಭವಿಸಿ ಬಿಟ್ಟಿದೆ.
ಇಲ್ಲಿ ನಾವೂ ಇಳಿಯಬೇಕಿದೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳದೆ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಮಾಡದೆ, ಅಮೂಲ್ಯ ಜೀವಹಾನಿಗಳಿಗೆ ಆಸ್ಪದ ಕೊಡದೆ ಕಾನೂನು ಚೌಕಟ್ಟಿನಲ್ಲಿ ನಿಂತುಕೊಂಡು ಗಂಭೀರವಾಗಿಯೇ ಇಳಿಯಬೇಕಿದೆ! ಅದು ಹೊಸ ಇಶ್ಯೂ ಬಂದಾಗ ಜಗ್ಗದೆ ನ್ಯಾಯ ದೊರಕುವವರೆಗೂ ಮುಂದುವರಿಯಬೇಕಾದ ಪ್ರತಿರೋಧವಾಗಿರಬೇಕು.
ನ್ಯಾಯ ಸಿಕ್ಕೇ ಸಿಗಬೇಕು ಎಂಬ ಅಚಂಚಲ ವಿಶ್ವಾಸದೊಂದಿಗೆ ಇಳಿಯಬೇಕಿದೆ. ಅದು ನಿನ್ನೆ ನಮ್ಮ ಸುಲ್ತಾನುಲ್ ಉಲಮಾ ರವರ ಮಾತಿನಲ್ಲಿ ನೀವು ಕೇಳಿರಬಹುದು. ಆ ಶಬ್ದಗಳೇ ನಮಗೆ ಮನಸ್ಸು ತುಂಬಾ ಧೈರ್ಯ ನೀಡುತ್ತದೆ! ಆ ಶಬ್ದಗಳಿಗೆ ಕೋಟಿ ಕೋಟಿ ಮುಸ್ಲಿಮರ ಹೃದಯದಲ್ಲಿ ಆತ್ಮವಿಶ್ವಾಸದ ಅರಮನೆಯನ್ನೇ ನಿರ್ಮಿಸುವ ಶಕ್ತಿ ಇದೆ!! ಪ್ರಧಾನ ಮಂತ್ರಿಯನ್ನೂ, ಗೃಹ ಮಂತ್ರಿಯನ್ನೂ ಕಂಡು ಮನವರಿಕೆ ಮಾಡಿ ಕೊಡುತ್ತೇವೆ, ಪರಿಹಾರ ಲಭಿಸದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂಬ ಅತ್ಯಂತ ಬೌದ್ಧಿಕವಾದ ಘೋಷಣೆ ನಿಜಕ್ಕೂ ಇಂಡಿಯನ್ ಗ್ರ್ಯಾಂಡ್ ಮುಫ್ತಿಯ ಅಧಿಕೃತ ಧ್ವನಿಯಾಗಿತ್ತದು!!!
ಈಗ ನಮ್ಮ ಕರ್ನಾಟಕ ಮುಸ್ಲಿಂ ಜಮಾಅತ್ ಡಿಸೆಂಬರ್ 23ರಂದು ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ನಾಗರಿಕ ಹಕ್ಕು ಸಮಾವೇಶ ಹಾಗೂ ರ್ಯಾಲಿಯನ್ನು ಘೋಷಣೆ ಮಾಡಿದೆ. ಅಂದು ರಾಜ್ಯದಾದ್ಯಂತ ವಿರುವ ಸುನ್ನೀ ಸಂಘಶಕ್ತಿಯ ಧೀರ ಯೋಧರು ರಾಷ್ಟ್ರ ರಕ್ಷಣೆಯ ಸಂಕಲ್ಪದೊಂದಿಗೆ ಬೀದಿಗಿಳಿಯಲಿದ್ದಾರೆ!
✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
📲 +91 9164630384