ರಿಯಾದ್: ಸೌದಿ ಅರೇಬಿಯಾದಲ್ಲಿ ವಲಸಿಗರಿಗೆ ತಮ್ಮ ಇಖಾಮಾವನ್ನು (ನಿವಾಸ ಪರವಾನಗಿ) ತಂತ್ರಜ್ಞಾನ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ನವೀಕರಿಸಲು ಶಿಕ್ಷಣ ಮತ್ತು ಕೆಲಸದ ಅನುಭವ ಪ್ರಮಾಣಪತ್ರಗಳ ಅಗತ್ಯವಿರುವ ಕಾನೂನನ್ನು ಜಾರಿಗೆ ತರಲಾಗಿದ್ದು, ವಲಸಿಗರನ್ನು ಸಂಕಷ್ಟಕ್ಕೀಡು ಮಾಡಿದೆ.
ಇತ್ತೀಚೆಗೆ, ಇಖಾಮಾದಲ್ಲಿ ತಾಂತ್ರಿಕ ಮತ್ತು ಅಕೌಂಟೆಂಟ್ ವೃತ್ತಿಯನ್ನು ನೋಂದಾಯಿಸಿಕೊಂಡವರು ಸೌದಿ ಇಂಜಿನಿಯರಿಂಗ್ ಕೌನ್ಸಿಲ್ ಮತ್ತು ಸೌದಿ ಆರ್ಗನೈಸೇಶನ್ ಫಾರ್ ಸರ್ಟಿಫೈಡ್ ಪಬ್ಲಿಕ್ ಅಕೌಂಟ್ಸ್ (ಸೋಕ್ಪ) ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಸೌದಿ ಅರೇಬಿಯಾ ಕಡ್ಡಾಯಗೊಳಿಸಿದೆ.
ಶೈಕ್ಷಣಿಕ ಮತ್ತು ಕೆಲಸದ ಅನುಭವ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಇಖಾಮಾವನ್ನು ನವೀಕರಿಸಲು ಸಾಧ್ಯ. ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿವೆ. ಎಲ್ಲಾ ಅಭ್ಯರ್ಥಿಗಳು ತಮ್ಮ ಅರ್ಹತಾ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಾಲಾವಧಿ ಮುಗಿಯುವ ಮುಂಚಿತವಾಗಿ ತಮ್ಮ ವೃತ್ತಿಪರ ನೋಂದಣಿಯನ್ನು ಪೂರ್ಣಗೊಳಿಸದಿದ್ದರೆ, ಅವರು ತಮ್ಮ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಲಾಗಿದ್ದು, ಹಾಗೆ ಮಾಡದಿದ್ದಲ್ಲಿ ಗಂಭೀರ ಪರಿಣಾಮಗಳು ಉಂಟಾಗಲಿವೆ ಎಂದು ಕಂಪೆನಿಗಳು ಎಚ್ಚರಿಸಿದೆ. ಇದು ಕಾರ್ಮಿಕರಿಗೆ ಮಾತ್ರವಲ್ಲದೆ ಉದ್ಯೋಗದಾತ ಮತ್ತು ಸಂಸ್ಥೆಯ ಮೇಲೂ ಪರಿಣಾಮ ಬೀರಲಿದೆ. ಅವರು ಕೂಡ ದಂಡಗಳನ್ನು ಎದುರಿಸಬೇಕಾಗುತ್ತದೆ.
ಇಖಾಮಾ ನವೀಕರಿಸದೆ ಕೆಲಸ ಮಾಡಿ ಸಿಕ್ಕಿಬಿದ್ದರೆ, ಉದ್ಯೋಗದಾತರಿಗೆ ದಂಡ ವಿಧಿಸುವುದಲ್ಲದೆ, ಸರಕಾರದಿಂದ ಅವರಿಗೆ ಲಭಿಸುವ ಸೇವೆಗಳಿಂದಲೂ ಭಾಗಶಃ ವಂಚಿತರಾಗಲಿದ್ದಾರೆ. ಈ ಪರಿಸ್ಥಿತಿಯನ್ನು ತಪ್ಪಿಸಲು, ನವೀಕರಿಸಲು ಇನ್ನೂ ಹೆಚ್ಚಿನ ಸಮಯವಿದ್ದರೂ ಸಹ ಕಂಪನಿಗಳು ಪ್ರಮಾಣಪತ್ರಗಳನ್ನು ತಯಾರಿಸುವಂತೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ತಮ್ಮ ಕೆಲಸಗಾರರಿಗೆ ಮನವರಿಕೆ ಮಾಡುವುದು ಕಂಡುಬರುತ್ತಿದೆ. ಅದರಂತೆ, ನಿಗದಿತ ಸಮಯದೊಳಗೆ ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸದವರಿಗೆ ಅನೇಕ ಕಂಪನಿಗಳು ಅಂತಿಮ ನಿರ್ಗಮನವನ್ನು ನೀಡಬೇಕಾಗುತ್ತವೆ.
ಅಕೌಂಟೆಂಟ್, ಕಂಪ್ಯೂಟರ್ ಪ್ರೋಗ್ರಾಮರ್, ಗ್ರಾಹಕ ಅಕೌಂಟೆಂಟ್, ತಂತ್ರಜ್ಞರು ಮತ್ತು ವಿವಿಧ ರೀತಿಯ ಮೆಕ್ಯಾನಿಕ್ಸ್ ಸೇರಿದಂತೆ ನೂರಾರು ವೃತ್ತಿಗಳಿಗೆ ಇದು ಅನ್ವಯಿಸುತ್ತದೆ. ಹುದ್ದೆಗಳ ಅನುಸಾರ ಪ್ರಮಾಣಪತ್ರಗಳನ್ನು ಆಯಾಯ ಸಚಿವಾಲಯಗಳ ಪೋರ್ಟಲ್‌ಗಳಿಗೆ ಅಪ್‌ಲೋಡ್ ಮಾಡಿ ಆನ್‌ಲೈನ್‌ನಲ್ಲಿ ನೋಂದಾಯಿಸಬೇಕು. ವೃತ್ತಿಪರ ನೋಂದಣಿ ಆರೋಗ್ಯ ವಿಮೆಯಷ್ಟೇ ಮಾನ್ಯವಾಗಿದೆ ಎಂಬುದನ್ನು ಖಚಿತಪಡಿಸಿದ ನಂತರವಷ್ಟೇ ಸೌದಿ ಪಾಸ್‌ಪೋರ್ಟ್ ಇಲಾಖೆ (ಜವಾಝಾತ್) ಇಖಾಮಾ ನವೀಕರಿಸಲಿದೆ.
ಮಾನ್ಯತೆ ಪಡೆಯದ ಶಿಕ್ಷಣ ಸಂಸ್ಥೆಯಿಂದ ನಕಲಿ ಪ್ರಮಾಣಪತ್ರ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ, ನಿಗದಿತ ದಿನಗಳಲ್ಲಿ ಅಂತರ್‌ರಾಷ್ಟ್ರೀಯ ಏಜೆನ್ಸಿಯ ಸಹಾಯದಿಂದ ನಡೆಸುವ ಪರಿಶೀಲನೆಯಲ್ಲಿ ಸಿಕ್ಕಿಹಾಕಿಕೊಂಡು, ನಕಲಿ ಎಂಬುದು ಕಂಡುಬಂದಲ್ಲಿ, ನಿಮ್ಮ ನೋಂದಣೆ ಸಾಧುವಾಗುವುದಿಲ್ಲ ಮತ್ತು ಮೋಸದ ಪ್ರಕರಣವನ್ನು ಎದುರಿಸಬೇಕಾಗುತ್ತದೆ. ಪ್ರಕರಣ ಇತ್ಯರ್ಥವಾಗುವವರೆಗೂ ದೇಶ ಬಿಡಲು ಸಾಧ್ಯವಿಲ್ಲ. ಅವು ನಕಲಿ ಎಂದು ಕಂಡುಬಂದಲ್ಲಿ ಶಿಕ್ಷೆ ಮತ್ತು ಆರ್ಥಿಕ ದಂಡ ವಿಧಿಸಬಹುದು. ಗಡೀಪಾರು ಮಾಡಿದ ನಂತರ, ಮತ್ತೆ ಸೌದಿ ಅರೇಬಿಯಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.






