ನವದೆಹಲಿ: ಬಹುಚರ್ಚಿತ ‘ಪೌರತ್ವ ತಿದ್ದುಪಡಿ ಮಸೂದೆ– 2019’ ಬುಧವಾರ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಮಸೂದೆ ಪರವಾಗಿ 125 ಸದಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧವಾಗಿ 105 ಮತಗಳು ಚಲಾವಣೆಯಾದವು.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಈ ವೇಳೆ ವಿಪಕ್ಷಗಳು ಮಸೂದೆಯನ್ನು ವಿರೋಧಿಸಿ ಗದ್ದಲ ಎಬ್ಬಿಸಿದವು.
ಶಿವಸೇನೆ ಸೇರಿದಂತೆ ಹಲವು ಪಕ್ಷಗಳು ಸಭಾತ್ಯಾಗ ಮಾಡಿ ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿದವು.
ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯು ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಶಾ, ‘ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತ ಮತ್ತು ಪಾಕಿಸ್ತಾನದಲ್ಲಿ ಸಮಾನ ಹಕ್ಕುಗಳನ್ನು ನೀಡಬೇಕು. ಅವರು ಸರ್ಕಾರದ ಭಾಗವಾಗಿದ್ದು, ಅವರಿಗೆ ಅವರ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಧಾರ್ಮಿಕ ಅಲ್ಪ ಸಂಖ್ಯಾತರ ಬಗ್ಗೆ ಉಭಯ ದೇಶಗಳ ಪ್ರಧಾನಿ ಈ ರೀತಿ ಹೇಳಿದ್ದಾರೆ. ಹಾಗಾಗಿ ದೇಶ ವಿಭಜನೆಯಾಗಿದ್ದು ಧರ್ಮದ ಆಧಾರದಲ್ಲಿ. ಐತಿಹಾಸಿಕ ಪ್ರಮಾದವನ್ನು ಸರಿ ಪಡಿಸುವ ಉದ್ದೇಶದಿಂದಲೇ ನಾವು ಈ ಮಸೂದೆ ಸಿದ್ಧಪಡಿಸಿದ್ದೇವೆ,’ ಎಂದು ಹೇಳಿದ್ದರು.
ಮಸೂದೆಯನ್ನು ಮತಕ್ಕೆ ಹಾಕಿದ ನಂತರ ರಾಜ್ಯಸಭೆಯನ್ನು ನಾಳೆಗೆ ಮುಂದೂಡಲಾಯಿತು.
ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಧರ್ಮದ ಆಧಾರದಲ್ಲಿ ಭಾರತದ ಪೌರತ್ವ ನೀಡುವುದು ಈ ಮಸೂದೆಯ ಪ್ರಮುಖಾಂಶ.






