ಮಂಗಳೂರು: ರಾಜ್ಯದ ಮುಸ್ಲಿಂ ಸಮುದಾಯದ ಮಾತೃ ಭಾಷೆಯಾದ ಬ್ಯಾರಿ ಭಾಷೆ ಇನ್ನು ಪಠ್ಯಪುಸ್ತಕದಲ್ಲಿ ಅಚ್ಚಾಗಲಿದ್ದು, ಐಚ್ಛಿಕ ತೃತೀಯ ಭಾಷೆಯಾಗಲಿದೆ.
ಮುಂದಿನ ಶೈಕ್ಷಣಿಕ ವರ್ಷ(2020-21)ದಿಂದ ಆರನೇ ತರಗತಿಯಿಂದ ಪಿಯುಸಿ ತನಕ ತೃತೀಯ ಭಾಷೆಯಾಗಿ ಬ್ಯಾರಿ ಭಾಷೆಯನ್ನು ಅನುಮೋದಿಸಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಈಗಾಗಲೇ 12 ತಜ್ಞರನ್ನು ಒಳಗೊಂಡ ಪಠ್ಯ ಪುಸ್ತಕ ರಚನಾ ಸಮಿತಿಯನ್ನು ರಚಿಸಲಾಗಿದೆ. ಬ್ಯಾರಿ ಭಾಷೆಯ ಅಸ್ಮಿತೆ ದೃಷ್ಟಿಯಿಂದ ಶಾಲೆಗಳಲ್ಲಿ ಪಠ್ಯ ಆರಂಭಗೊಳಿಸೋದು ಅನಿವಾರ್ಯ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ರಚನಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಪಠ್ಯ ಪುಸ್ತಕ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.
ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಿರೋದ್ರಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ಬ್ಯಾರಿ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದ ಎಲ್ಲಾ ಮುಸ್ಲಿಂ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ.