ಮಂಗಳೂರು,ಡಿ.4: ಪ್ರಮುಖ ಧಾರ್ಮಿಕ ಕೇಂದ್ರ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಹಾಗೂ ಅದರ ಅಧೀನದ ಸಂಸ್ಥೆಗಳಿಗೆ ಆಡಳಿತಾಧಿಕಾರಿಯಾಗಿ ಹಾಜಿ ಇಬ್ರಾಹಿಂ ಗೂನಡ್ಕರನ್ನು ನೇಮಕಗೊಳಿಸಿ ಹೊರಡಿಸಿದ್ದ ಆದೇಶವನ್ನು ಸಿಎಂ ಕಚೇರಿ ತಡೆಹಿಡಿದಿದೆ.
ಇದಕ್ಕೂ ಮೊದಲು ಉಳ್ಳಾಲ ದರ್ಗಾ ಮತ್ತು ಅದರ ಅಧೀನ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ವಿಚಾರದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ , “ಮುಂದಿನ ಆದೇಶದವರೆಗೆ ಇಬ್ರಾಹೀಂ ಗೂನಡ್ಕ ಅವರು ಅಧಿಕಾರ ಸ್ವೀಕರಿಸದಂತೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಉಳ್ಳಾಲ ಸಯ್ಯಿದ್ ಮದನಿ ಆಡಳಿತ ಸಮಿತಿಯಲ್ಲಿ ಗೊಂದಲವಿರುವ ಕಾರಣ ಸಯ್ಯಿದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರವು ಆಡಳಿತಾಧಿಕಾರಿಯನ್ನಾಗಿ ಇಬ್ರಾಹಿಂ ಗೂನಡ್ಕರವರನ್ನು ನೇಮಕ ಮಾಡಿತ್ತು. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಉಳ್ಳಾಲ ದರ್ಗಾ ಸಮಿತಿಯು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಾಧೀಶರಾದ ಡಿ.ವೀರಪ್ಪರವರು ಸರ್ಕಾರಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದರು.