ಬೆಳ್ತಂಗಡಿ: ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಲ್ಲಿ ಸಂಘಟಿತ ರೂಪದಲ್ಲಿ ಕಾರ್ಯನಿರ್ವಹಿಸುವ ಉದ್ಧೇಶಕ್ಕೆ ಕಳೆದ ಎಂಟು ತಿಂಗಳ ಹಿಂದೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರ. ಕಾರ್ಯದರ್ಶಿ ಕಾಂತಪುರಂ ಎ.ಪಿ ಉಸ್ತಾದ್ ಘೋಷಣೆ ಮಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಬೆಳ್ತಂಗಡಿ ತಾಲೂಕು ಸಮಿತಿ ಘೋಷಣಾ ಸಮಾವೇಶ ಅಕ್ಟೋಬರ್ 4. ರಂದು ಅಪರಾಹ್ನ 3.00 ಕ್ಕೆ ಬೆಳ್ತಂಗಡಿ ಸುವರ್ಣ ಆರ್ಕೇಡ್ ಸಭಾಂಗಣದಲ್ಲಿ ನಡೆಯಲಿದೆ.
ಸಮುದಾಯದ ಗಣ್ಯರನ್ನು, ಉಮರಾ ಪ್ರಮುಖರನ್ನು, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಮುದಾಯದ ಪರಿಣತ ಮಂದಿಯನ್ನು ಸೇರಿಸಿಕೊಂಡು ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳವ ಹಾಗೂ ಎಲ್ಲ ಸಮುದಾಯಗಳ ಮಧ್ಯೆ ಪ್ರೀತಿ ವಿಶ್ವಾಸ ಮೂಡಿಸುವ ಮತ್ತು ರಾಜಕೀಯ ರಹಿತವಾಗಿ ದೇಶದ ಅಭಿವೃದ್ಧಿಯಲ್ಲಿ ಪಾತ್ರವಹಿಸುವ ಉದ್ದೇಶಕ್ಕೆ ರೂಪುಗೊಂಡಿರುವ ಮುಸ್ಲಿಂ ಜಮಾಅತ್ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ತನ್ನ ಸಮಿತಿಗಳನ್ನು ರೂಪಿಸಿಕೊಂಡಿದೆ.
ರಾಜ್ಯಮಟ್ಟದ ಸಂಘಟನೆ ಘೋಷಣೆಯಾದ ಬಳಿಕ ಜಿಲ್ಲೆ, ತಾಲ್ಲೂಕು ಮತ್ತು ವಲಯ ಮಟ್ಟಗಳಲ್ಲಿ ಸಂಘಟನೆ ವಿಸ್ತರಣೆಯಾಗುತ್ತಿದ್ದು ಅದರ ಭಾಗವಾಗಿ ಬೆಳ್ತಂಗಡಿಯಲ್ಲೂ ನೂತನ ತಾಲೂಕು ಸಮಿತಿ ಘೋಷಣೆ ಯಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಸಮಿತಿ ಘೋಷಣಾ ಸಮಾವೇಶದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರ. ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ದ.ಕ ಜಿಲ್ಲಾಧ್ಯಕ್ಷ ಏನೆಪೋಯ ಅಬ್ದುಲ್ಲಕುಂಞಿ, ಕಾರ್ಯಾಧ್ಯಕ್ಷ ಎಸ್. ಎಮ್ ರಶೀದ್ ಹಾಜಿ, ಕಾರ್ಯದರ್ಶಿ ಮಮ್ತಾಝ್ ಅಲಿ, ಕೋರ್ಡಿನೇಟರ್ ಡಾ.ಅಬ್ದುರ್ರಶೀದ್ ಝೈನಿ, ಕೋಶಾಧಿಕಾರಿ ಅರಬಿ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ.