ರಿಯಾದ್: ಸೌದಿ ಅರೇಬಿಯಾದ ಶೋ ರೂಂ ಮ್ಯಾನೇಜರ್ ಹುದ್ದೆಗಳನ್ನು ಸ್ವದೇಶೀಕರಣಗೊಳಿಸಲಾಗಿದೆ. ಕಾರ್ಮಿಕ ಸಚಿವಾಲಯದ ಪ್ರಕಾರ, ಸ್ವದೇಶೀಕರಣಗೊಳಿಸಲಾದ 12 ಕ್ಷೇತ್ರಗಳಲ್ಲಿ ಶೋ ರೂಂ ಮ್ಯಾನೇಜರ್ ಹುದ್ದೆಗೆ ನೀಡಲಾದ ಸಮಯಾವಕಾಶವನ್ನು ಕೊನೆಗೊಳಿಸಿರುವುದಾಗಿ ಕಾರ್ಮಿಕ ಸಚಿವಾಲಯ ತಿಳಿಸಿದೆ.
ಕಾರ್-ಬೈಕ್ ಶೋ ರೂಂಗಳು, ರೆಡಿಮೇಡ್ ಉಡುಪುಗಳು, ಮಕ್ಕಳ ಬಟ್ಟೆ ಮತ್ತು ಕನ್ನಡಕಗಳನ್ನು ಮಾರಾಟ ಮಾಡುವ ಅಂಗಡಿಗಳು, ವಾಹನ ಬಿಡಿಭಾಗಗಳು, ಕಟ್ಟಡ ಸಾಮಗ್ರಿಗಳು, ಪೀಠೋಪಕರಣಗಳು, ಪಾತ್ರೆಗಳು, ವೈದ್ಯಕೀಯ ಉಪಕರಣಗಳು, ರತ್ನಗಂಬಳಿಗಳು ಮತ್ತು ಎಲೆಕ್ಟ್ರಿಕ್-ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ ಕೇಂದ್ರಗಳಲ್ಲಿ ಮೂರು ಹಂತವಾಗಿ ಸ್ವದೆಶೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಮೊದಲ ಹಂತವನ್ನು ಕಳೆದ ವರ್ಷ ಸೆಪ್ಟೆಂಬರ್ 11 ರಂದು ಜಾರಿಗೆ ತರಲಾಯಿತು. ಎರಡನೇ ಹಂತ ನವೆಂಬರ್ 9 ರಿಂದ ಮತ್ತು ಮೂರನೇ ಹಂತ ಈ ವರ್ಷ ಜನವರಿ 7 ರಿಂದ ಜಾರಿಗೆ ಬಂದಿದೆ. ಆದರೆ, ಶೋ ರೂಂನ ಮ್ಯಾನೇಜರ್ ಹುದ್ದೆಗಳ ಸ್ವದೇಶೀಕರಣ ಸಂಬಂಧಿಸಿ ಒಂದು ವರ್ಷದ ರಿಯಾಯಿತಿ ನೀಡಲಾಗಿತ್ತು. ಸ್ಥಳೀಯರು ಸಾಕಷ್ಟು ಅನುಭವ ಗಳಿಸುವ ಉದ್ದೇಶದಿಂದ ವಿದೇಶಿಯರಿಗೆ ಈ ಪ್ರದೇಶಗಳಲ್ಲಿ ಒಂದು ವರ್ಷದ ವಿನಾಯಿತಿ ನೀಡಲಾಗಿತ್ತು.
ಕಾರ್ಮಿಕ ಸಚಿವಾಲಯದ ವಕ್ತಾರ ಖಾಲಿದ್ ಅಬಾ ಖೈಲ್ ಮಾತನಾಡಿ, ಈ ಗಡುವು ಮುಗಿದಿದೆ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಸ್ಥಳೀಯರಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು. ಈ ಉದ್ಯೋಗಗಳಲ್ಲಿ ವಿದೇಶಿಯರನ್ನು ಸೇರಿಸಿಕೊಳ್ಳುವುದು ಮತ್ತು ವಿದೇಶಿಯರಿಗೆ ನೇರ ಅಥವಾ ಪರೋಕ್ಷ ಉದ್ಯೋಗವನ್ನು ನೀಡುವುದನ್ನು ನಿಷೇಧಿಸಲಾಗಿದೆ.