ಮುಂಬೈ :ಭಾರತದಲ್ಲಿ ಡಿಜಿಟಲ್ ಹಣ ವರ್ಗಾವಣೆ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿ ಬ್ಯಾಂಕಿಂಗ್ ವ್ಯವಸ್ಥೆಗೂ ಕಾಲಿಡಲು ಕಾತರಿಸುತ್ತಿದ್ದ ಪೇಟಿಎಂ ಸಂಸ್ಥೆ ಇದೀಗ ಭಾರೀ ನಷ್ಟಕ್ಕೆ ಒಳಗಾಗಿದೆ. ಪೇಟಿಎಂ ನ ಮೂಲ ಸಂಸ್ಥೆಯಾದ ಒನ್ 97 ಕಮ್ಯೂನಿಕೇಷನ್ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 4,217.20 ಕೋಟಿ ನಷ್ಟ ಅನುಭವಿಸಿದೆ ಎಂಬ ದಾಖಲೆಗಳು ಇದೀಗ ಬಿಡುಗಡೆಯಾಗಿದ್ದು ಅಚ್ಚರಿ ಮೂಡಿಸಿದೆ.
ಒನ್ 97 ಕಮ್ಯೂನಿಕೇಷನ್ ಸಂಸ್ಥೆ ಕಳೆದ 2018ರ ಆರ್ಥಿಕ ವರ್ಷದಲ್ಲಿ 3,309.61 ಕೋಟಿ ವ್ಯವಹಾರ ನಡೆಸಿದೆ. ಇನ್ನೂ 2019ರಲ್ಲಿ 3,579.67 ಕೋಟಿ ವ್ಯವಹಾರ ದಾಖಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಪೇಟಿಎಂ ವ್ಯವಹಾರ ದೇಶದಲ್ಲಿ ಶೇ. 8.2 ರಷ್ಟು ವೃದ್ಧಿಯಾಗಿದೆ. ಆದರೆ, ಬ್ರ್ಯಾಂಡ್ ವ್ಯಾಲ್ಯೂ ಅಧಿಕ ಮಾಡುವ ಹಪಹಪಿಯಲ್ಲಿ ಪೇಟಿಎಂ ಸಂಸ್ಥೆ ಖರ್ಚು ಮಾಡಿರುವ ಹಣ ಈ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ.
ಕಳೆದ 2018ರಲ್ಲಿ ಪೇಟಿಎಂ ತನ್ನ ಬ್ರ್ಯಾಂಡ್ ವ್ಯಾಲ್ಯೂಗೆ 4,864.53 ಕೋಟಿ ಹಣ ವ್ಯಯಿಸಿದ್ದರೆ, 2019ರಲ್ಲಿ 7730.14 ಕೋಟಿ ಹಣ ವ್ಯಯಿಸಿದೆ. ಇದೇ ಕಾರಣಕ್ಕೆ ನಷ್ಟದ ಪ್ರಮಾಣ ಅಧಿಕವಾಗಿದೆ ಎಂದು ಪೇಟಿಎಂ ಸಂಸ್ಥೆ ತನ್ನ ವರ್ಷಾಂತ್ಯ ಆರ್ಥಿಕ ವರದಿಯಲ್ಲಿ ತಿಳಿಸಿದೆ. ಪ್ರಸ್ತುತ ದೇಶದಾದ್ಯಂತ ಪೇಟಿಎಂ ಸಂಸ್ಥೆಯ ಸುಮಾರು 14 ಮಿಲಿಯನ್ ನಷ್ಟು ಸ್ಟೋರ್ಗಳು ಕಾರ್ಯನಿರ್ವಹಿಸುತ್ತಿವೆ.