janadhvani

Kannada Online News Paper

ಕೇಂದ್ರದಿಂದ ಪರಿಹಾರ ಹಣ ವಿಳಂಬ- ತೀವ್ರ ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರಕಾರ

ಬೆಂಗಳೂರು,ಸೆಪ್ಟೆಂಬರ್.09: ಮೈತ್ರಿ ಸರ್ಕಾರ ಹಾಗೂ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಕಳೆದ ಒಂದೂವರೆ ವರ್ಷಗಳಿಂದ ಹತ್ತಾರು ಹೊಸ ಯೋಜನೆಗಳಿಗೆ ಚಾಲನೆ ನೀಡಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಬಹುತೇಕ ಎಲ್ಲಾ ಹೊಸ ಯೋಜನೆಗಳಿಗೆ ಅನುದಾನವನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೆ, ಯೋಜನೆಗಳಿಗೆ ಸಂಬಂಧಿಸಿದ ಕಡತಗಳಿಗೆ ಹಿಂಬರಹ ಬರೆದು ಅಧಿಕೃತ ಸೂಚನೆ ನೀಡುತ್ತಿರುವ ಹಣಕಾಸು ಇಲಾಖೆ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತಿದೆ. ಅಲ್ಲದೆ, ನೆರೆಪರಿಹಾರ ಹೊರತುಪಡಿಸಿ ಬೇರೆ ಯಾವುದೇ ಹೊಸ ಕಾಮಗಾರಿಗಳಿಗೆ ಹಣ ಇಲ್ಲ ಎಂದು ಸೂಚಿಸುತ್ತಿದೆ.

ರಾಜ್ಯ ಸರ್ಕಾರ ಆರ್ಥಿಕ ಸಂಷಕ್ಟಕ್ಕೆ ಸಿಲುಕಿದೆಯಾ? ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆಯಾ? ಆಡಳಿತ ಯಂತ್ರ ಸುಸೂತ್ರವಾಗಿ ನಡೆಯಲು ಅಗತ್ಯವಾದ ಹಣವೂ ಸಹ ಇದೀಗ ಬಿಎಸ್​ವೈ ಸರ್ಕಾರದ ಬಳಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆಯೇ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಕಾರಣವಾಗಿದೆ ಸರ್ಕಾರ ಹಾಗೂ ಹಣಕಾಸು ಇಲಾಖೆಯ ವರ್ತನೆ.

ಪಿಡಬ್ಲ್ಯೂಡಿ ಅಪೆಂಡಿಕ್ಸ್ ಇ ಯೋಜನೆ ಸೇರಿದಂತೆ 5,000 ಕೋಟಿ ಕಾಮಗಾರಿಗಳು ಸ್ಥಗಿತ!

ಆರ್ಥಿಕ ಸಂಕಷ್ಟದಿಂದಾಗಿ ಪಿಡಬ್ಲ್ಯೂಡಿ ಇಲಾಖೆಯ ಅಡಿಯಲ್ಲಿ ಚಾಲನೆ ನೀಡಲಾಗಿದ್ದ ಹೊಸ ಕಟ್ಟಡಗಳು ಹಾಗೂ ಸೇತುವೆಗಳ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಅಂದಾಜಿನ ಪ್ರಕಾರ 1,200 ಕೋಟಿ ರೂ. ಪ್ರಮಾಣದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ.ಇನ್ನೂ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ 34 ಇಲಾಖೆಗಳ ಅನಗತ್ಯ ಯೋಜನೆಗಳಿಗೆ ಫುಲ್ ಸ್ಟಾಪ್ ಹಾಕಲಾಗಿದೆ.

100 ರಿಂದ 200 ಕೋಟಿ ರೂ. ವೆಚ್ಚದ ಎಲ್ಲಾ ಕಾಮಗಾರಿಗಳು ಇದೀಗ ಸ್ಥಗಿತಗೊಂಡಿದ್ದು, ಹೊಸ ಬಜೆಟ್ ಮಂಡನೆಯಾಗುವವರೆಗೆ ಹೊಸ ಯೋಜನೆಗಳಿಗೆ ಹಣಕಾಸು ಪೂರೈಸುವುದು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಈಗಾಗಲೇ ತಿಳಿಸಿದೆ. ಹೀಗಾಗಿ ಈಗ ಖಜಾನೆಯಲ್ಲಿರುವ ಸಂಪೂರ್ಣ ಹಣವನ್ನೂ ನೆರೆ ಸಂತ್ರಸ್ಥರ ಪುನರ್ವಸತಿಗೆ ಬಳಸಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಈವರೆಗೆ ಒಟ್ಟು 5,000 ಕೋಟಿ ರೂ ವೆಚ್ಚದ ನೂತನ ಕಾಮಗಾರಿಗಳಿಗೆ ಬ್ರೇಕ್ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಖಜಾನೆಗೆ ದುಬಾರಿಯಾದ ನೆರೆ; ಕೇಂದ್ರದಿಂದ ಇನ್ನೂ ಬಂದಿಲ್ಲ ಪರಿಹಾರ: ರಾಜ್ಯ ಸರ್ಕಾರದ ಬಜೆಟ್ ಗಾತ್ರದ ಅರ್ಧದಷ್ಟು ಹಣ ಈ ಬಾರಿ ನೆರೆಗೆ ವಿನಿಯೋಗಿಸಲಾಗಿದೆ. ನೆರೆ ಪರಿಹಾರ ವಿತರಣೆಯಿಂದಲೇ ರಾಜ್ಯ ಬೊಕ್ಕಸ ಖಾಲಿಯಾಗಿದೆ. ಇನ್ನೂ ಸಂತ್ರಸ್ತರಿಗೆ ಪನರ್ವಸತಿ ಕೆಲಸಗಳು ಬೇರೆ ಆಗಬೇಕಿದೆ. ಆದರೆ, ಈವರೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಪರಿಹಾರದ ಹಣ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ. ಇದೇ ಕಾರಣಕ್ಕೆ ರಾಜ್ಯದ ಬೊಕ್ಕಸ ಸಂಪೂರ್ಣವಾಗಿ ಖಾಲಿಯಾಗಿದೆ ಎನ್ನಲಾಗುತ್ತಿದೆ.

ಇದಲ್ಲದೆ ತೆರಿಗೆ ಸಂಗ್ರಹದಲ್ಲೂ ರಾಜ್ಯ ಸರ್ಕಾರಕ್ಕೆ ಹಿನ್ನಡೆಯುಂಟಾಗಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ತೆರಿಗೆ ಅತ್ಯಂತ ಕಡಿಮೆ ಸಂಗ್ರಹವಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಕೇಂದ್ರದಿಂದ ಶೀಘ್ರದಲ್ಲಿ ನೆರೆ ಪರಿಹಾರದ ಹಣ ಬಿಡುಗಡೆಯಾಗದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

error: Content is protected !! Not allowed copy content from janadhvani.com